ದಕ್ಷಿಣ ಕನ್ನಡ: ಕಳೆದ ಕೆಲವು ದಿನಗಳ ರಿಷಬ್ ಶೆಟ್ಟಿ ದೈವದ ಸೇವೆ ನಡೆಸಿದ್ದು, ದೈವ ಅವರ ತೊಡೆ ಮೇಲೆ ಮಲಗಿಕೊಂಡ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಈ ವಿಡಿಯೋ ನೋಡಿದ ಅಲ್ಲಿನ ದೈವ ಭಕ್ತರೊಬ್ಬರು ದೈವಗಳನ್ನು ಬೀದಿಗೆ ತಂದು ನಿಲ್ಲಿಸಲಾಗಿದೆ ಎಂದು ಬೇಸರ ಹೊರ ಹಾಕಿದ್ದರು. ದೈವ ಈ ರೀತಿ ಮಡಿಲಲ್ಲಿ ಮಲಗುವುದು ಇಲ್ಲ ಎಂಬ ಮಾತನ್ನು ಹೇಳಿದ್ದರು. ಇದೀಗ ಇದಕ್ಕೆ ಸಂಬಂಧಿಸಿದಂತೆ ಇಂದು ಬಾರೆಬೈಲು ಶ್ರೀ ಜಾರಂದಾಯ ಬಂಟ ದೈವಸ್ಥಾನ ಮತ್ತು ಶ್ರೀ ವಾರಾಹಿ ಪಂಜುರ್ಲಿ ದೈವಸ್ಥಾನದ ಆಡಳಿತ ಸಮಿತಿ ಸುದ್ದಿಗೋಷ್ಠಿ ನಡೆಸಿ ಇದಕ್ಕೆ ಸ್ಪಷ್ಟನೆ ನೀಡಿದೆ.
ನಟ ರಿಷಬ್ ಶೆಟ್ಟಿ ಅವರು ನೀಡಿದ ಹರಕೆ ನೇಮೋತ್ಸವ ಕಟ್ಟುಕಟ್ಟಳೆ ಹಾಗೂ ಕ್ಷೇತ್ರದ ಸಂಪ್ರದಾಯದಂತೆ ನಡೆದಿದೆ. ಕಳೆದ ಹಲವು ವರ್ಷಗಳಿಂದ ಇದೇ ಸಂಪ್ರದಾಯದಲ್ಲಿ ಎಣ್ಣೆ ಬೂಳ್ಯ ಪ್ರಕ್ರಿಯೆ ನಡೆಯುತ್ತದೆ. ಇಲ್ಲಿ ದೈವಕ್ಕೆ ಉಗ್ರದಲ್ಲಿ ಎಣ್ಣೆ ಬೂಳ್ಯ ಆಗುತ್ತದೆ. ರಿಷಬ್ ಶೆಟ್ಟಿ ನೇಮ ನೀಡುವುದಾಗಿ ಕೆಲ ತಿಂಗಳ ಹಿಂದೆ ಹರಕೆ ಹೇಳಿದ್ದರು. ಅದಕ್ಕಾಗಿ ದೈವದ ಬಳಿ ಅನುಮತಿ ಕೇಳಿದ್ದೆವು. ಅಪ್ಪಣೆಯೂ ದೊರಕಿತ್ತು. ಅದರಂತೆ ನೇಮ ನಡೆದಿದೆ. ಎಣ್ಣೆ ಬೂಳ್ಯದ ಸಂದರ್ಭದಲ್ಲಿ ದೈವ ಮಡಿಲಲ್ಲಿ ಮಲಗಿಲ್ಲ. ಸೇವಾಕರ್ತರ ಕೈ ಹಿಡಿದು ಅಲ್ಲೆ ನೆಲದಲ್ಲಿ ಕುಳಿತಿದೆ.
ಈ ಸಂಪ್ರದಾಯ ಹೊಸತೇನು ಅಲ್ಲ. ತುಳುನಾಡಿನ ಹಲವು ದೈವಸ್ಥಾನದಲ್ಲಿ ಈ ಸಂಪ್ರದಾಯವೇ ಇದೆ. ದೈವಸ್ಥಾನದ ಬಗ್ಗೆ ಅಪಪ್ರಚಾರ ಮಾಡುವವರ ವಿರುದ್ಧ ಮಂಗಳೂರು ನಗರ ಪೊಲೀಸ್ ಆಯುಕ್ತರು ಮತ್ತು ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ತಿಳಿಸಿದ್ದಾರೆ.

