ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ ಡಿ.09 : ವಿಧಾನಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್‍ಗೆ ಸಚಿವ ಸ್ಥಾನ ನೀಡುವಂತೆ ಶ್ರೀಕೃಷ್ಣ ಯಾದವಾನಂದ ಮಹಾಸ್ವಾಮಿ ಕಾಂಗ್ರೆಸ್ ನಾಯಕರುಗಳನ್ನು ಒತ್ತಾಯಿಸಿದರು.
ಹೊಳಲ್ಕೆರೆ ರಸ್ತೆಯಲ್ಲಿರುವ ಯಾದವ ಮಠದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ ಪ್ರತಿಯೊಂದು ಜನಾಂಗಕ್ಕೂ ರಾಜಕೀಯ ಪ್ರಾತಿನಿಧ್ಯ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾದವ ಜನಾಂಗದ ಡಿ.ಟಿ.ಶ್ರೀನಿವಾಸ್‍ಗೆ ಮಂತ್ರಿ ಸ್ಥಾನ ಕೊಟ್ಟರೆ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ.
ಜಯಮ್ಮ ಬಾಲರಾಜ್‍ರವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ನೇಮಿಸಲಾಗಿತ್ತು. ಅದರಂತೆ ಈ ಬಾರಿಯೂ ನಮ್ಮ ಜನಾಂಗಕ್ಕೆ ಅವಕಾಶ ಕಲ್ಪಿಸಬೇಕು. ಬೆಳಗಾವಿಯ ಅಧಿವೇಶನ ಮುಗಿದ ನಂತರ ಸಿ.ಎಂ.ಬಳಿ ಜನಾಂಗದಿಂದ ನಿಯೋಗ ಹೋಗುತ್ತೇವೆಂದು ತಿಳಿಸಿದರು.
ಯಾದವ ಸಮಾಜದ ಮುಖಂಡ ಕೆ.ಎಂ.ಹಾಲಸ್ವಾಮಿ ಮಾತನಾಡಿ ವಿಧಾನಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್‍ಗೆ ಸಚಿವ ಸ್ಥಾನ ನೀಡಿ ನಮ್ಮ ಜನಾಂಗಕ್ಕೆ ಆಗಿರುವ ವಂಚನೆಯನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸರಿಪಡಿಸಬೇಕು. 2008 ರಲ್ಲಿ ಚಿತ್ರದುರ್ಗದಲ್ಲಿ ನಡೆದ ಸಮಾವೇಶಕ್ಕೆ ಅಂದಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿರವರನ್ನು ಬಿಟ್ಟು ಅಹಿಂದ ನಾಯಕ ಸಿದ್ದರಾಮಯ್ಯನವರನ್ನು ಕರೆಸಿದ್ದೆವು. 2013 ರಲ್ಲಿ ನಮ್ಮ ಜನಾಂಗದ ಎ.ಕೃಷ್ಣಪ್ಪನವರಿಗೆ ಟಿಕೇಟ್ ತಪ್ಪಿತ್ತು. ಹಾಗಾಗಿ ಈಗ ಡಿ.ಟಿ.ಶ್ರೀನಿವಾಸ್‍ಗೆ ಸಚಿವ ಸ್ಥಾನ ನೀಡಿ ಯಾದವ ಜನಾಂಗಕ್ಕೆ ಸಾಮಾಜಿಕ ನ್ಯಾಯ ಒದಗಿಸುವಂತೆ ಮನವಿ ಮಾಡಿದರು.
ನಗರಸಭೆ ಮಾಜಿ ಅಧ್ಯಕ್ಷ ಗೊಲ್ಲ ಸಮಾಜದ ಮುಖಂಡ ಸಿ.ಟಿ.ಕೃಷ್ಣಮೂರ್ತಿ ಮಾತನಾಡುತ್ತ ಸಣ್ಣ ಸಣ್ಣ ಜಾತಿಯವರನ್ನು ಎಂ.ಎಲ್.ಸಿ.ಮಾಡಿ ಮಂತ್ರಿ ಸ್ಥಾನ ನೀಡಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಬಾರಿಯ ಸಚಿವ ಸಂಪುಟ ವಿಸ್ತರಣೆಯಲ್ಲಿ ವಿಧಾನಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್‍ಗೆ ಸಚಿವ ಸ್ಥಾನ ಕೊಡಬೇಕು. 25 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯಿರುವ ಯಾದವ ಸಮಾಜವನ್ನು ಕಡೆಗಣಿಸದೆ ಪ್ರಾತಿನಿಧ್ಯ ಕೊಡಬೇಕೆಂದು ಕಾಂಗ್ರೆಸ್ ನಾಯಕರುಗಳನ್ನು ಆಗ್ರಹಿಸಿದರು.
ಯಾದವ ಸಮಾಜದ ಮುಖಂಡರುಗಳಾದ ಭೀಮಸಮುದ್ರದ ಸಿದ್ದಪ್ಪ, ರೇವಣಸಿದ್ದಪ್ಪ ಇನ್ನು ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.






