ಮಂಡ್ಯ: ಮೊದಲೇ ರಾಜ್ಯದಲ್ಲಿ ರಾಜಕೀಯ ಬೆಳವಣಿಗೆ ದೊಡ್ಡಮಟ್ಟಕ್ಕೆ ನಡೆಯುತ್ತಾ ಇದೆ. ಸಿಎಂ ಖುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ಪ್ಲ್ಯಾನ್ ಮಾಡ್ತಾ ಇದ್ರೆ, ಆ ಖುರ್ಚಿ ಮೇಲೆ ಕುಳಿತುಕೊಳ್ಳಲು ನಾನಾ ಪ್ರಯತ್ನದಲ್ಲಿ ಡಿಕೆ ಶಿವಕುಮಾರ್ ನಿರತರಾಗಿದ್ದಾರೆ. ಈ ಎಲ್ಲಾ ಬೆಳವಣಿಗೆಯ ನಡುವೆ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಗಿಳಿ ಶಾಸ್ತ್ರ ಕೇಳಿದ್ದಾರೆ. ನವೆಂಬರ್ ಕ್ರಾಂತಿಯ ಬಗ್ಗೆ ಮಾತನಾಡಿದ್ದ ಬಿಜೆಪಿಗರಿಗೆ ಗಿಳಿ ಶಾಸ್ತ್ರ ಕೇಳುವಂತೆ ಡಿಕೆ ಶಿವಕುಮಾರ್ ಅವರು ಟಾಂಗ್ ಕೊಟ್ಟಿದ್ದರು. ಇದೀಗ ಗಿಳಿ ಶಾಸ್ತ್ರ ಕೇಳಿ ತಿರುಗೇಟು ನೀಡಿದ್ದಾರೆ.
ಡಿಕೆ ಶಿವಕುಮಾರ್ ಅವರು ಸಿಎಂ ಆಗ್ತಾರಾ..? ಇಲ್ವಾ..? ಎಂಬ ಪ್ರಶ್ನೆಯನ್ನ ಗಿಳಿ ಬಳಿ ಕೇಳಿದ್ದಾರೆ. ಆಗ ಗಿಳಿ ಒಂದು ಕಾರ್ಡ್ ಅನ್ನು ತೆಗೆದುಕೊಟ್ಟಿದ್ದು, ಆ ಕಾರ್ಡ್ ನಲ್ಲಿ ಚೊಂಬಿನ ಚಿತ್ರಣವಿದೆ. ಈ ಭವಿಷ್ಯದ ಬಳಿಕ ಡಿಕೆ ಶಿವಕುಮಾರ್ ಸಿಎಂ ಆಗಲ್ಲ, ಅವರ ಕೈಗೆ ಸಿಗೋದು ಚೊಂಬೇ ಎಂದು ಬಿಜೆಪಿ ನಾಯಕರು ವ್ಯಂಗ್ಯವಾಡಿದ್ದಾರೆ.
ಡಿಕೆ ಶಿವಕುಮಾರ್ ಪರವಾಗಿರುವ ಒಂದಷ್ಟು ನಾಯಕರು ದೆಹಲಿಗೆ ಹೋಗಿ ಹೈಕಮಾಂಡ್ ಭೇಟಿಯಾಗಲು ಪ್ರಯತ್ನಿಸಿದ್ದಾರೆ. ಬಳಿಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಬೆಂಗಳೂರಿಗೆ ಬಂದಿದ್ದಾರೆ. ಈಗಾಗಲೇ ಒಂದು ಸುತ್ತಿನ ಮಾತುಕತೆಯೂ ಆಗಿದೆ. ಸಿದ್ದರಾಮಯ್ಯ ಅವರನ್ನು ಕರೆಸಿಕೊಂಡು ಮಲ್ಲಿಕಾರ್ಜುನ ಖರ್ಗೆ ಅವರು ಚರ್ಚೆ ಮಾಡಿದ್ದಾರೆ ಈ ಎಲ್ಲಾ ಬೆಳವಣಿಗೆಯನ್ನು ನೋಡುತ್ತಿರುವ ರಾಜ್ಯದ ಜನ ಮುಂದೆ ಏನೆಲ್ಲಾ ಬೆಳವಣಿಗೆಯಾಗಬಹುದು ಎಂಬ ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಸಿಎಂ ಸ್ಥಾನವನ್ನು ಸಿದ್ದರಾಮಯ್ಯ ಅವರು ತ್ಯಜಿಸುವ ಪರಿಸ್ಥಿತಿ ಬರುತ್ತಾ ಅಥವಾ ಡಿಸಿಎಂ ಡಿಕೆ ಶಿವಕುಮಾರ್ ತಣ್ಣಗಾಗ್ತಾರಾ ನೋಡಬೇಕಿದೆ.






