ಬೆಂಗಳೂರು: ಅಧಿಕಾರ ಪಡೆದುಕೊಳ್ಳುವ ಡಿಕೆಶಿ ಹಠವು ಮುಂದುವರೆದಿದೆ. ರಾಜಕೀಯದಲ್ಲಿ ಸಾಕಷ್ಟು ಬದಲಾವಣೆಗಳು ಕೂಡ ಕಂಡು ಬರ್ತಿದೆ. ಡಿಕೆ ಶಿವಕುಮಾರ್ ಪರ ಸಾಕಷ್ಟು ಶಾಸಕರು, ಸಚಿವರು ಕೂಡ ಧ್ವನಿ ಎತ್ತಿದ್ದಾರೆ. ಈ ಬೆನ್ನಲ್ಲೇ ಇಂದು ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಅದು ಡಿಕೆ ಶಿವಕುಮಾರ್ ತುಂಬಾ ಇಷ್ಟಪಡುವಂತಹ ದೇವರ ಉತ್ಸವ ಮೂರ್ತಿ ಡಿಕೆಶಿ ಅವರ ಮನೆಗೆ ಬಂದಿದೆ.
ಹಾಸನ ಜಿಲ್ಲೆಯ ಅರಸೀಕೆರೆಯ ಪ್ರಸಿದ್ಧವಾದ ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಉತ್ಸವ ಮೂರ್ತಿಯ ಪಲ್ಲಕ್ಕಿ ಡಿಕೆ ಶಿವಕುಮಾರ್ ಅವರ ಸದಾಶಿವನಗರ ನಿವಾಸಕ್ಕೆ ಆಗಮಿಸಿದೆ. ಜುಲೈ 26ರಂದು ಡಿಕೆ ಶಿವಕುಮಾರ್ ಅವರು ಸಿದ್ದೇಶ್ವರ ಸ್ವಾಮಿ ಸನ್ನಿಧಾನಕ್ಕೆ ಭೇಟಿ ನೀಡಿದ್ದರು. ಹರಕೆ ಸಲ್ಲಿಸಿ ಬಂದಿದ್ದರು. ಇದೀಗ ಬೆಳ್ಳಂ ಬೆಳ್ಳಗ್ಗೆ ಸಿದ್ದೇಶ್ವರ ಸ್ವಾಮಿ ಮೂರ್ತಿಯೇ ಡಿಕೆಶಿ ಮನೆಗೆ ಬಂದಿದೆ. ಮನೆಯೊಳಗೆ ಕೂರಿಸಿ, ವಿಶೇಷ ಪೂಜೆಯನ್ನು ಮಾಡಿ, ಇಷ್ಟಾರ್ಥ ಸಿದ್ಧಿ ಬಗ್ಗೆ ಬೇಡಿಕೊಂಡಿದ್ದಾರೆ.
ರಾಜಕೀಯ ಬೆಳವಣಿಗೆಯಲ್ಲಿ ಸದ್ಯ ಖುರ್ಚಿ ಕಸರತ್ತು ಮುಂದುವರೆದಿದೆ. ಅತ್ಯಾಪ್ತರೆಲ್ಲ ಸೇರಿ ಈಗಾಗಲೇ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ. ಶಾಸಕ ಸಿಪಿ ಯೋಗೀಶ್ವರ್, ಶ್ರೀನಿವಾಸ ಮಾನೆ, ಪ್ರಕಾಶ್ ಕೋಳಿವಾಡ, ಯಾಸಿರ್ ಖಾನ್ ಪಠಾಣ್ ಸೇರಿದಂತೆ ಹಲವರು ಸದಾಶಿವನಗರ ಮನೆಗೆ ಭೇಟಿ ನೀಡಿ, ಮಾತುಕತೆ ನಡೆಸಿದ್ದಾರೆ. ಜೊತೆಗೆ ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿಗೆ ಬಂದಿದ್ದಾರೆ. ಹೀಗಾಗಿ ಡಿಕೆ ಶಿವಕುಮಾರ್ ಪರ ಇರುವ ನಾಯಕರೆಲ್ಲ ಸೇರಿ ಖರ್ಗೆ ಅವರನ್ನು ಭೇಟಿಯಾಗಲಿದ್ದಾರೆ ಎನ್ನಲಾಗಿದೆ. ಭೇಟಿ ಮಾಡಿ ಸಿಎಂ ಹುದ್ದೆಯ ಬಗ್ಗೆ ಚರ್ಚಿಸುವ ಸಾಧ್ಯತೆ ಇದೆ.






