ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್.
ಹೊಳಲ್ಕೆರೆ,
ಚಿತ್ರದುರ್ಗ ಜಿಲ್ಲೆ.
ಮೊಬೈಲ್ ಮೊಬೈಲ್ ಸಂಖ್ಯೆ : 93424 66936
ಸುದ್ದಿಒನ್ : ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು ತಾಲೂಕು ಲಕ್ಯಾ ಹೋಬಳಿಯ ಅಯ್ಯನ ಕೆರೆಯ ಒಂದು ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು, ಇದು ರಾಜ್ಯದ ಎರಡನೇ ಅತಿ ದೊಡ್ಡ ಕೆರೆಯಾಗಿದ್ದು ನೂರಕ್ಕೂ ಅಧಿಕ ಎಕರೆಯಲ್ಲಿ ವ್ಯಾಪಿಸಿದೆ. ಸಾವಿರಾರು ಎಕರೆ ಪ್ರದೇಶಕ್ಕೆ ನೀರಾವರಿ ಒದಗಿಸುವ ಈ ಕೆರೆಗೆ ಭವ್ಯ ಇತಿಹಾಸವು ಇದೆ. ಕೆರೆಗಳು ನಮ್ಮ ನಾಡಿನ ಜೀವನಾಡಿಯಾಗಿದ್ದು ಎಂತಹ ಸಂದರ್ಭದಲ್ಲಿಯು ಮಾನವ ಕುಲಕ್ಕೆ ಒಳಿತನ್ನು ಮಾಡುವ ಸದ್ದುದ್ದೇಶದಿಂದ ಹಿಂದಿನವರು ನಿರ್ಮಿಸಿದ ಕೆರೆಗಳು ಇಂದಿಗೂ ಜೀವಂತವಾಗಿವೆ.
ಅಪೂರ್ವ ಸೌಂದರ್ಯ ಹಾಗೂ ಜಲರಾಶಿಯೊಂದಿಗೆ ಪ್ರಕೃತಿಯ ಮಡಿಲಲ್ಲಿರುವ ಅಯ್ಯನಕೆರೆಯನ್ನು ಪ್ರತಿಯೊಬ್ಬರೂ ಜೀವನದಲ್ಲಿ ಒಂದಲ್ಲ ಒಂದು ಬಾರಿ ತಪ್ಪದೇ ನೋಡಲೇಬೇಕು. ಪ್ರವಾಸಿಗರ ಅತ್ಯಂತ ನೆಚ್ಚಿನ ಸ್ಥಳವಾಗಿರುವ ಈ ಕೆರೆಯು ಕಡೂರು- ಚಿಕ್ಕಮಗಳೂರು ಹೆದ್ದಾರಿಯ ಸಖರಾಯಪಟ್ಟಣದಿಂದ ಪಶ್ಚಿಮಕ್ಕೆ 5 km ದೂರದಲ್ಲಿದ್ದು,ಮುಖ್ಯ ರಸ್ತೆಯಿಂದ ಉತ್ತಮ ರಸ್ತೆ ಸಂಪರ್ಕವಿದೆ.
ಇಲ್ಲಿಗೆ ಸ್ವಂತ ವಾಹನದಲ್ಲಿ ಮಾತ್ರ ತೆರಳಬೇಕಾಗುತ್ತದೆ.
ಕೆರೆಯ ಪಶ್ಚಿಮಕ್ಕೆ ಇರುವ ಬಾಬಾಬುಡನಗಿರಿ ಗುಡ್ಡ ಸಾಲುಗಳಿಂದ ಹರಿದು ಬರುವ ಗೌರಿ ಹಳ್ಳಕ್ಕೆ ಅಡ್ಡಲಾಗಿ ಈ ಕೆರೆಯನ್ನು ನಿರ್ಮಿಸಲಾಗಿದ್ದು, ಇಲ್ಲಿ ವೇದ +ಆವತಿ ನದಿಗಳು ಕೂಡಿ ಮುಂದೆ ಇಲ್ಲಿಂದ ಸಾಗಿ ವೇದಾವತಿ ನದಿಯಾಗಿ ಹರಿದು ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಬಳಿ ಇರುವ ವಾಣಿವಿಲಾಸ ಸಾಗರ ಜಲಾಶಯಕ್ಕೆ ತಲುಪುತ್ತದೆ.
ಬೇಸಿಗೆಯಲ್ಲಿ ನೀರಿನ ಹರಿವು ಕಡಿಮೆಯಾದರೂ ಹಚ್ಚಹಸುರಿನ ವಾತಾವರಣ ನೋಡುಗರ ಕಣ್ಮನ ಸೆಳೆಯುತ್ತದೆ. ಮಳೆಗಾಲ ಹಾಗೂ ಅದರ ನಂತರದ ದಿನಗಳಲ್ಲಿ ಈ ಕೆರೆ ಹಾಗೂ ಸುತ್ತಮುತ್ತಲಿನ ಬೆಟ್ಟ ಗುಡ್ಡಗಳ ಪ್ರದೇಶಗಳು ಹಚ್ಚಹಸುರನ್ನು ಹೊದ್ದು ಮಲೆನಾಡಿನ ಸಿರಿಯನ್ನು ಮತ್ತಷ್ಟು ಮೆರಗು ಗೊಳಿಸಿಬಿಡುತ್ತವೆ.
ಕೋಡಿಯಲ್ಲಿ ಹರಿಯುವ ನೀರಿನಲ್ಲಿ ಪ್ರವಾಸಿಗರು ಈಜಾಡಿ ನೀರಿನಲ್ಲಿ ಚಿನ್ನಾಟವಾಡುವುದನ್ನು ನೋಡುವುದೇ ಸೊಗಸು.
ಗಂಟೆಗಟ್ಟಲೆ ಇಲ್ಲಿ ನೀರಿನಲ್ಲಿ ಆಟವಾಡಿದರೂ ಸಮಯ ಸರಿದು ಹೋದುದೇ ಗೊತ್ತಾಗುವುದಿಲ್ಲ.
ಕೆರೆಯ ಮಧ್ಯಭಾಗದಲ್ಲಿರುವ ವೀಕ್ಷಣಾ ಗೋಪುರಕ್ಕೆ ಕೆರೆಯಿಂದ ಸಣ್ಣ ಸೇತುವೆ ನಿರ್ಮಿಸಲಾಗಿದ್ದು ಇದು ಪ್ರವಾಸಿಗರ ನೆಚ್ಚಿನ ಸಿಗ್ನೇಚರ್ ಸ್ಪಾಟ್ ಆಗಿದೆ. ಕೆರೆಯ ಉತ್ತರಕ್ಕೆ ಹಿಂಭಾಗದಲ್ಲಿ ಇರುವ ಶಕುನಗಿರಿಯ ಚೂಪಾದ ತುದಿಯ ಬೆಟ್ಟವು ಹಿನ್ನೆಲೆಗೆ ಉತ್ತಮ ಬ್ಯಾಕ್ ಡ್ರಾಪ್ ಒದಗಿಸುತ್ತದೆ. ಕೆರೆಯ ಅಂಚಿನಂದ ಸೂರ್ಯೋದಯ ಸೂರ್ಯಸ್ತಮನ ಅತ್ಯಂತ ಸುಂದರವಾಗಿ ಗೋಚರಿಸುತ್ತದೆ. ಸ್ವಚ್ಛ ಸುಂದರ ತಿಳಿಯಾದ ನೀರಿನಲ್ಲಿ ಬಾನಿನಲ್ಲಿ ಹೋಗುತ್ತಿರುವ ಮೋಡಗಳ ಪ್ರತಿಫಲನ ನೋಡುವುದೇ ಒಂದು ಕಣ್ಣಿಗೆ ಹಬ್ಬ. ಒಂದು ಉತ್ತಮ ಸಮಯ ತಮ್ಮ ಪ್ರೀತಿ ಪಾತ್ರರ ಜೊತೆಗೆ ಕಳೆ ಬೇಕೆನ್ನುವವರು ಇಲ್ಲಿಗೆ ತಪ್ಪದೆ ಭೇಟಿ ನೀಡಬೇಕು.
ನಿಸರ್ಗದ ಮಡಿಲಲ್ಲಿರುವ ಈ ತಾಣಕ್ಕೆ ಬಂದರೆ ನೆಮ್ಮದಿ, ಪ್ರಶಾಂತತೆ ಕಂಡುಕೊಳ್ಳಬಹುದು ಯಾವುದೇ ಗೌಜು ಗದ್ದಲ, ಗಲಾಟೆ,ವಾಹನದ ಶಬ್ದ ಇಲ್ಲದೆ ಕೇವಲ ಪ್ರಕೃತಿಯ ನಿನಾದ, ಹಕ್ಕಿಗಳ ಕಲರವವನ್ನು ಆಸ್ವಾದಿಸಬಹುದು.
ಇದರ ಬಳಿಯಲ್ಲಿಯೇ ಹೊಯ್ಸಳರ ಕಾಲದ ನಿರ್ಮಾಣವಾದ ವೀರ ಬಲ್ಲಾಳೇಶ್ವರ ದೇವಾಲಯವಿದ್ದು ಅಷ್ಟೇ ಪ್ರಾಚೀನವಾದ ಸ್ಥಳವಾಗಿದೆ.
ಈ ಅಯ್ಯನಕೆರೆಯ ಪಶ್ಚಿಮಕ್ಕೆ ಇರುವ ಚಂದ್ರದ್ರೋಣ ಪರ್ವತ ಹಾಗೂ ಬಾಬಾಬುಡನಗಿರಿ ಶ್ರೇಣಿಗಳ ಕಣಿವೆಗಳಿಂದ ಹರಿದು ಬರುವ ನೀರನ್ನು ಹತ್ತಿರದ ಶಕುನಗಿರಿ ಬೆಟ್ಟದ ತಪ್ಪಲಿನಲ್ಲಿ ಸಂಗ್ರಹಿಸಿ ಕೃಷಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ನಿರ್ಮಾಣ ಮಾಡಲಾಗಿರುವ ಕೆರೆ ಇದಾಗಿದೆ.
ಕೆರೆಯನ್ನು ಪುರಾಣ ಪ್ರಸಿದ್ಧ ರುಕ್ಮಾಂಗದ ರಾಜ ನಿರ್ಮಿಸಿದ ಬಗ್ಗೆ ಮಾಹಿತಿ ಇದ್ದರೂ ಕ್ರಿ.ಶ. 1156 ರಲ್ಲಿ ಹೊಯ್ಸಳರ ದೊರೆ ವಿಷ್ಣುವರ್ಧನನ ಮಗ ಒಂದನೇ ನರಸಿಂಹನ ಕಾಲದಲ್ಲಿ ಜೀರ್ಣೋದ್ಧಾರವಾದ ಬಗ್ಗೆ ಮಾಹಿತಿ ಸಿಗುತ್ತದೆ.
ಜಾನಪದ ಐತಿಹ್ಯ:
ರುಕ್ಮಂಗದ ರಾಜನ ಕಾಲದಲ್ಲಿ ಇದನ್ನು ನೋಡಿಕೊಳ್ಳಲು ಚನ್ನಬಿಲ್ಲ ಹೊನ್ನಬಿಲ್ಲ ಎಂಬ ಇಬ್ಬರು ನೀರುಗಂಟಿಗಳು ಇದ್ದರು. ಮಳೆಗಾಲದ ಒಂದು ದಿನ ಜೋರಾಗಿ ಮಳೆ ಸುರಿಯಲಾರಂಭಿಸಿತು.
ಆಗ ಅಶರೀರವಾಣಿ (ವರುಣದೇವ)ಯು ಈಗ ನೀರಿನ ಹರಿವು ಹೆಚ್ಚಾಗಿ ಕೋಡಿ ಹೊಡೆದು ಕೆರೆಯ ನೀರು ಊರಿಗೆ ನುಗ್ಗುತ್ತದೆ.ನಾನು ಈಗ ಬರಲೋ? ಬೇಡವೋ? ಹೇಳಿರಿ ಎಂದು ನೀರುಗಂಟಿಗಳನ್ನು ಆಶರೀರವಾಣಿಯು ಕೇಳಿತು. ಆಗ ಆ ಇಬ್ಬರೂ ನಾವು ಹೋಗಿ ರಾಜನನ್ನು ಕೇಳಿಕೊಂಡು ಬರುತ್ತೇವೆ ಎಂದು ಹೇಳಿ ಅಲ್ಲಿಂದ ಹೊರಟು ನಾವು ವಾಪಸ್ ಬಂದರೆ ತಾನೇ ಈ ನೀರು ಊರಿಗೆ ನುಗ್ಗಿ ಹಾಳಾಗುತ್ತದೆ ಎಂದು ತಮ್ಮ ಕತ್ತುಗಳನ್ನು ಒಬ್ಬರಿಗೊಬ್ಬರು ಕತ್ತರಿಸಿಕೊಂಡು ಹುತಾತ್ಮರಾದರು, ಕೆರೆಗೆ ಹಾರವಾದರು.ಅವರ ಮಂಟಪಗಳು ಇಂದಿಗೂ ಇಲ್ಲಿನ ದಡದಲ್ಲಿ ಕಾಣಬಹುದು.
ಇನ್ನೊಂದು ಐತಿಹ್ಯ ಸ್ವತಃ ಮಹಾತಪಸ್ಸಿಗಳಾದ ಇಲ್ಲಿನ ಅಜ್ಜಯ್ಯ ಸ್ವಾಮಿಗಳು ಸತತ ಪ್ರಯತ್ನ ಮಾಡಿದರೂ ಕೆರೆಯ ಏರಿ ನಿಲ್ಲದಿದ್ದಾಗ ಅವರೇ ಕೆರೆಯ ಏರಿಯಲ್ಲಿ ಕುಳಿತು ಅಡ್ಡವಾಗಿ ಕೆರೆಗೆ ಏರಿಯಾದರಂತೆ. ಆಗ ಕೆರೆಯ ಏರಿಯು ನಿಂತಿತಂತೆ. ಅವರ ಹೆಸರನ್ನೇ ಕೆರೆಗೆ ಅಯ್ಯನಕೆರೆ ಎಂದು ನಾಮಕರಣ ಮಾಡಲಾಗಿದೆ.
ಬೆಳಿಗ್ಗೆ ಆರರಿಂದ ಸಂಜೆ 6 ವರೆಗೆ ಇಲ್ಲಿಗೆ ಪ್ರವೇಶವಿರುತ್ತದೆ. ಪ್ರವೇಶ ಉಚಿತವಾಗಿದ್ದು ಬಂದ ಪ್ರವಾಸಿಗರು ಊಟ ತಿಂಡಿ ಜೊತೆಯಲ್ಲೇ ತೆಗೆದುಕೊಂಡು ಬರಬೇಕಾಗುತ್ತದೆ.
ಇಲ್ಲಿ ಯಾವುದೇ ಸೌಲಭ್ಯಗಳು ಇರುವುದಿಲ್ಲ.











