ಬೆಂಗಳೂರು: ಕಾಂಗ್ರೆಸ್ ಪಾದಯಾತ್ರೆಗೆ ಸಂಬಂಧಿಸಿದಂತೆ ನ್ಯಾಯಾಲಯ ನೀಡಿದ ನಿರ್ದೇಶನವನ್ನು ಸ್ವಾಗತಿಸುತ್ತೇನೆ. ಇದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕೋವಿಡ್ ನಿಯಂತ್ರಣ ಮಾರ್ಗಸೂಚಿಗೆ ಪೂರಕವಾಗಿದೆ. ಕೋವಿಡ್ ಪ್ರಕರಣ ಹೆಚ್ಚಿರುವ ಈ ಸಮಯದಲ್ಲಿ ಇದು ಸೂಕ್ತವಾಗಿದೆ. ಕಾಂಗ್ರೆಸ್ ನ ಬೇಜವಾಬ್ದಾರಿ ನಡೆಯನ್ನು ಜನ ಮರೆಯುವುದೂ ಇಲ್ಲ, ಕ್ಷಮಿಸುವುದೂ ಇಲ್ಲ, ಎಂದರು.
ರಾಜ್ಯದಲ್ಲಿ ಸೋಂಕು ದಿನೇ ದಿನೇ ಹೆಚ್ಚಳವಾಗುತ್ತಿದೆ. ಆದರೂ 5-6% ರೋಗಿಗಳು ಮಾತ್ರ ಆಸ್ಪತ್ರೆ ಸೇರುತ್ತಿದ್ದಾರೆ. ನರ್ಸ್ ಗಳು ಕೂಡಾ ಸೋಂಕಿಗೊಳಗಾಗುತ್ತಿರುವುದು ಆತಂಕದ ವಿಚಾರವಾಗಿದೆ. ಹೀಗಾಗಿ ಮತ್ತಷ್ಟು ಎಚ್ಚರಿಕೆ ಅವಶ್ಯಕತೆ ಇದೆ. ರಾಜ್ಯದಲ್ಲಿ ಕೊರೊನಾ ಇನ್ನು ಪೀಕ್ ಗೆ ಹೋಗಿಲ್ಲ ಎಂದು ತಜ್ಞರು ಕೂಡಾ ಹೇಳಿದ್ದಾರೆ. ಫೆಬ್ರವರಿ ಮೊದಲ ವಾರ ಪೀಕ್ ಗೆ ಹೋಗುವ ಸಾಧ್ಯತೆ ಇದೆ. 3-4ನೇ ವಾರದಿಂದ ಕಡಿಮೆ ಆಗಲಿದೆ ಎಂದು ತಜ್ಞರು ಹೇಳಿದ್ದಾರೆ ಎಂದರು.
ಕಳೆದ ವಾರದಿಂದ ವೀಕೆಂಡ್ ನಿರ್ಬಂಧ ತರಲಾಗಿದೆ. ಆದರೆ 7 ದಿನಕ್ಕೆ ಸೋಂಕು ಕಡಿಮೆ ಆಗುವುದಿಲ್ಲ. ಮೊದಲ ಎರಡು ಅಲೆಯಲ್ಲಿ 14 ದಿನಗಳ ಚೈನ್ ಇತ್ತು. ಆದರೆ ಈ ಅಲೆಯಲ್ಲಿ ಸ್ವಲ್ಪ ಕಡಿಮೆ ಇದೆ. ಈ ಬಾರಿಯ ಸೋಂಕು 5-6 ಪಟ್ಟು ವೇಗವಾಗಿ ಹರಡುತ್ತಿದೆ. ಇನ್ನು ಸ್ವಲ್ಪ ದಿನದಲ್ಲಿ ವೀಕೆಂಡ್ ಕರ್ಫ್ಯೂ ನಿಂದಾದ ಫಲಿತಾಂಶ ದೊರೆಯಬಹುದು ಎಂದರು.