ಆಧುನಿಕ ಭರಾಟೆಯಲ್ಲಿ ದೇಸಿ ಕ್ರೀಡೆಗಳು ಕಣ್ಮರೆ : ಎಡಿಸಿ ಬಿ.ಟಿ.ಕುಮಾರಸ್ವಾಮಿ

2 Min Read

ಚಿತ್ರದುರ್ಗ. ನ.18: ಆಧುನಿಕತೆಯ ಭರಾಟೆಯಲ್ಲಿ ದೇಸಿಯ ಕ್ರೀಡೆಗಳು ಕಣ್ಮರೆಯಾಗುತ್ತಿವೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಹೇಳಿದರು.

 

ನಗರದ ಸರ್ಕಾರಿ ಕಲಾ ಕಾಲೇಜು ಕ್ರೀಡಾಂಗಣದಲ್ಲಿ ಮಂಗಳವಾರ ದಾವಣಗೆರೆ ವಿಶ್ವವಿದ್ಯಾನಿಲಯ, ದಾವಣಗೆರೆ ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ನಿರ್ದೇಶಕರ ಸಂಘ ಇವರ ಸಂಯುಕ್ತಾಶ್ರಯದಲ್ಲಿ “ದಾವಣಗೆರೆ ವಿಶ್ವವಿದ್ಯಾನಿಲಯ ಅಂತರ ಕಾಲೇಜು ನೆಟ್ ಬಾಲ್ ಪಂದ್ಯಾವಳಿ ಮತ್ತು ಆಯ್ಕೆ ಉದ್ಘಾಟಿಸಿ ಅವರು ಮಾತನಾಡಿದರು.

ಯುವಕರು ಸೇರಿ ಎಲ್ಲಾ ವಯಸ್ಕರು ಆಧುನಿಕತೆಗೆ ಸಿಲುಕಿ ದೇಸಿಯ ವಿವಿಧ ಕ್ರೀಡಾ ಪ್ರಕಾರಗಳು ಕಣ್ಮರೆಯಾಗುತ್ತಿವೆ. ಗ್ರಾಮೀಣ ಪರಿಸರದಲ್ಲಿ ಜನರ ಮನರಂಜನೆಯ ಆಟಗಳು ಇಲ್ಲವಾಗಿವೆ. ಮೊಬೈಲ್ ಬಳಕೆಯ ಸಂಸ್ಕøತಿ ಹೆಚ್ಚಾಗಿರುವ ಸಂಬಂಧ ನಮ್ಮೆಲ್ಲರಲ್ಲಿರುವ ಸೃಜನಶೀಲತೆ ನಿಧಾನವಾಗಿ ಕಡಿಮೆಗೊಳ್ಳುತ್ತಿದೆ. ಆಧುನಿಕತೆಯ ಸೆಳೆತಕ್ಕೆ ಸಿಲುಕಿ ಅಧ್ಯಯನದ ನಿರಾಸಕ್ತಿ ಮತ್ತು ಕ್ರಿಯಾಶೀಲತೆಯಿಂದ ದೂರವಾಗುತ್ತಿದ್ದೇವೆ. ಇಂತಹ ನಾನಾ ರೀತಿಯ ದೌರ್ಬಲ್ಯ ಬದಿಗೊತ್ತಿ, ಬದಲಾಗುವ ಮೂಲಕ ಉತ್ತಮ ಜೀವನ ರೂಪಿಸಿಕೊಳ್ಳಲು ಕ್ರೀಡೆಗಳು ಸಹಕಾರಿಯಾಗಿವೆ ಎಂದರು.

ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲ ಡಾ. ಜೆ.ಕರಿಯಪ್ಪ ಮಾಳಿಗೆ ಮಾತನಾಡಿ, ಯಾವುದೇ ಕ್ಷೇತ್ರದಡಿ ಉತ್ತಮ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡರೆ ಸಾಧನೆಯ ಹಾದಿ ಸುಲಭವಾಗುತ್ತದೆ. ಅದೇ ರೀತಿ ಕ್ರೀಡೆಯು ಸಹ ನಮ್ಮೆಲ್ಲರ ಸರ್ವತೋಮುಖ ಬೆಳವಣಿಗೆಯಲ್ಲಿ ತಾಯಿಯ ಪಾತ್ರ ವಹಿಸುತ್ತದೆ. ಕ್ರೀಡೆ ಎಲ್ಲರಿಗೂ ತುಂಬಾ ಅಗತ್ಯವೆನಿಸಿದೆ. ಏಕೆಂದರೆ ಕ್ರೀಡೆ ಸೌಹಾರ್ದತೆಯ ಹಾಗೂ ಸಾಮರಸ್ಯದ ಸಂಕೇತ. ನಾವೆಲ್ಲರೂ ಒಂದೇ ಎನ್ನುವ ಭಾವನೆ ಹಾಗೂ ಭಾವೈಕ್ಯತೆ, ಸೃಜನಶೀಲತೆ, ಪ್ರೀತಿ, ಕ್ರೀಯಾಶೀಲತೆ ಹಾಗೂ ನಮ್ಮಲ್ಲೂ ಮಾನವ ಪ್ರೀತಿ ಇದೆ ಎಂಬುದನ್ನು ಕ್ರೀಡೆಯಿಂದ ಕಾಣಬಹುದು. ಕ್ರೀಡೆಗಳು ಅಂತರ್ ರಾಷ್ಟ್ರೀಯ ಮತ್ತು ರಾಷ್ಟ್ರೀಯ ಹಾಗೂ ರಾಜ್ಯ, ಜಿಲ್ಲೆಗಳ ಮಧ್ಯೆ ಜನರೊಂದಿಗೆ ಸಂಬಂಧಗಳನ್ನು ಬೆಸೆಯುತ್ತಿವೆ. ಜೀವನದ ಆಟದ ಮೈದಾನದಲ್ಲಿ ಸೋಲಿನಲ್ಲಿ ಕುಗ್ಗದೆ, ಗೆಲುವಿನಲ್ಲಿ ಹಿಗ್ಗದೆ ಮಾನವ ಪ್ರೀತಿ ಗಳಿಸಿಕೊಳ್ಳಬೇಕು ಎಂದು ಹೇಳಿದ ಅವರು, ಕ್ರೀಡೆಯಿಂದ ದೂರವಾದವರು ಹಲವಾರು ಸಮಸ್ಯೆಗಳಿಗೆ ತುತ್ತಾಗುತ್ತೀರಿ,. ಸಮ ಸಮಾಜದಲ್ಲಿ ನಮ್ಮ ನಡೆ-ನುಡಿ ಹಾಗೂ ಆಲೋಚನೆಗಳು ನಮ್ಮನ್ನು ಪ್ರತಿಬಿಂಬಿಸುತ್ತವೆ ಎಂದು ಹೇಳಿದರು.

ದಾವಣಗೆರೆ ವಿಶ್ವವಿದ್ಯಾನಿಲಯದ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಹಾಗೂ ಸಿಂಡಿಕೇಟ್ ಸದಸ್ಯ ಪ್ರೊ. ಹೆಚ್.ತಿಪ್ಪೆಸ್ವಾಮಿ ಮಾತನಾಡಿ, ಕ್ರೀಡೆಗಳು ನಮ್ಮ ಬದುಕಿಗೆ ಯಶಸ್ಸು ಹಾಗೂ ಬೆಳಕು ತಂದುಕೊಡುತ್ತವೆ. ಇವೆಲ್ಲವನ್ನೂ ತಂದುಕೊಡುವ ಕ್ರೀಡೆಗಳ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು. ಕ್ರೀಡೆಗಳಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಲು ಸಾಧ್ಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸರ್ಕಾರಿ ಕಲಾ ಕಾಲೇಜು ಅಧ್ಯಾಪಕರ ಸಂಘದ ಜಂಟಿ ಕಾರ್ಯದರ್ಶಿ ಡಾ.ಪಿ.ಎಸ್.ಮೇಘನಾ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಡಿ.ಆರ್.ಪ್ರಸನ್ನ ಕುಮಾರ್, ಅರ್ಥಶಾಸ್ತ್ರ ಪ್ರಾಧ್ಯಾಪಕ ಭಾನುಪ್ರಕಾಶ್,  ಪತ್ರಾಂಕಿತ ವ್ಯವಸ್ಥಾಪಕ ಮಾರ್ಟಿನ್ ಸ್ಯಾಮುಯೆಲ್ ಡಬ್ಲ್ಯೂ, ಗ್ರಂಥಾಲಯಾಧಿಕಾರಿ ಡಾ.ತಿಪ್ಪೇಸ್ವಾಮಿ ಸೇರಿದಂತೆ ಮತ್ತಿತರರು ಇದ್ದರು.

Share This Article