ಸುದ್ದಿಒನ್, ಚಿತ್ರದುರ್ಗ, ನವೆಂಬರ್. 13 : ಮಾನವ ಸಮಾಜದ ಪ್ರಗತಿಗೆ ವಿಜ್ಞಾನವೇ ಆಧಾರ” ಎಂದು ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಅಧ್ಯಕ್ಷರಾದ ಡಾ.ಜಿ. ಎನ್. ಮಲ್ಲಿಕಾರ್ಜುನಪ್ಪ ತಿಳಿಸಿದರು.
ನಗರದ ಹೊರವಲಯದಲ್ಲಿರುವ ಶ್ರೀ ಜಗದ್ಗುರು ಸಿದ್ದರಾಮೇಶ್ವರ ಮಹಾಸಂಸ್ಥಾನದ ಆವರಣದಲ್ಲಿ ಇಂದು (ನವೆಂಬರ್. 13) ನಡೆದ ವಿಶ್ವ ವಿಜ್ಞಾನ ದಿನಾಚರಣೆ ಉದ್ಘಾಟಿಸಿ ಮಾತನಾಡುತ್ತಿದ್ದರು.
ಆರೋಗ್ಯದಿಂದ ಹಿಡಿದು ತಂತ್ರಜ್ಞಾನದವರೆಗೆ, ವಿಜ್ಞಾನ ನಮ್ಮ ಬದುಕಿನ ಪ್ರತಿಯೊಂದು ಅಂಶವನ್ನು ಸ್ಪರ್ಶಿಸಿದೆ. ನಿತ್ಯ ಜೀವನದಲ್ಲಿ ವಿಜ್ಞಾನವು ಹಾಸುಹೊಕ್ಕಾಗಿದೆ. ವಿಜ್ಞಾನವಿಲ್ಲದೇ ಬದುಕೇ ಇಲ್ಲ. ಅದರ ಪ್ರತಿಯೊಂದು ಅಂಶವನ್ನು ನಾವು ಉಪಯೋಗಿಸಿಕೊಂಡು ಜೀವಿಸುತ್ತಿದ್ದೇವೆ. ಇದೇ ಕಾರಣಕ್ಕೆ ಪ್ರತಿ ವರ್ಷ ನವೆಂಬರ್ 10 ರಂದು ವಿಶ್ವದಾದ್ಯಂತ “ಶಾಂತಿ ಮತ್ತು ಅಭಿವೃದ್ಧಿಗಾಗಿ ವಿಶ್ವ ವಿಜ್ಞಾನ ದಿನ” ವನ್ನು ಆಚರಣೆ ಮಾಡುತ್ತಿದ್ದೇವೆ. ವಿಜ್ಞಾನವನ್ನು ಸಮಾಜದ ಒಳಿತಿಗೆ ಬಳಕೆ ಮಾಡುವ ಜಾಗೃತಿ ಮೂಡಿಸುವುದು” ಈ ದಿನದ ಉದ್ದೇಶ ಎಂದು ತಿಳಿಸಿದರು.
ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಕಾರ್ಯದರ್ಶಿ ಶ್ರೀ ಎಚ್.ಎಸ್.ಟಿ.ಸ್ವಾಮಿ ವಿಶ್ವ ವಿಜ್ಞಾನ ದಿನದ ಪ್ರಯುಕ್ತ ಉಪನ್ಯಾಸ ಮಾಡುತ್ತಾ “ವಿಜ್ಞಾನವು ಶಾಂತಿ, ಅಭಿವೃದ್ಧಿ ಮತ್ತು ಸುಸ್ಥಿರ ಜೀವನಕ್ಕಾಗಿ ಅತ್ಯಗತ್ಯವಾಗಿದೆ. ವಿಜ್ಞಾನ ಕ್ಷೇತ್ರದಲ್ಲಿ ನಡೆಯುತ್ತಿರುವ ಹೊಸ ಹೊಸ ಸಂಶೋಧನೆಗಳ ಬಗ್ಗೆ ಜಾಗೃತಿ ಮೂಡಿಸುವುದು, ದೇಶ ದೇಶಗಳ ನಡುವೆ ವೈಜ್ಞಾನಿಕ ವಿನಿಮಯ ಆಗಬೇಕಿದೆ. ವಿಜ್ಞಾನವು ಎದುರಿಸುತ್ತಿರುವ ಸವಾಲುಗಳ ಕುರಿತು ಚಿಂತನೆ ನಡೆಸ ಬೇಕಿದೆ. ವಿದ್ಯಾರ್ಥಿಗಳು ಮೂಲ ವಿಜ್ಞಾನದತ್ತ ಒಲವು ತೋರಿಸಿ. ವಿಜ್ಞಾನ ಕ್ಷೇತ್ರದಲ್ಲಿ ಆಗಿರುವ ಹಾಗೂ ಭವಿಷ್ಯದಲ್ಲಿ ಆಗಬೇಕಿರುವ ಸಂಶೋಧನೆಗಳ ಬಗ್ಗೆ ತಿಳಿದುಕೊಳ್ಳುವುದು ಈ ದಿನದ ಉದ್ದೇಶ” ಎಂದು ಉತ್ತೇಜಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಶ್ರೀಧರ್ ಹಾಗೂ ದಿನೇಶ್ ಕುಮಾರ್ ವೇದಿಕೆಯಲ್ಲಿದ್ದರು.
















