ಹುಬ್ಬಳ್ಳಿ: ಡಿಸೆಂಬರ್ ಅಂತ್ಯದೊಳಗೆ ರಾಜ್ಯದ ಅರ್ಹರೆಲ್ಲರಿಗೂ ಶೇ.90 ರಷ್ಟು ಕೋವಿಡ್ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕೋವಿಡ್ ಅಲೆಗಳು ರಾಜ್ಯ ಮತ್ತು ದೇಶದ ಆರೋಗ್ಯ ವ್ಯವಸ್ಥೆಯ ಸಾಮರ್ಥ್ಯ ಮತ್ತು ಕೊರತೆಗಳೆರಡನ್ನೂ ಪರಿಚಯಿಸಿವೆ. ಜೊತೆಗೆ ಆರೋಗ್ಯ ಕ್ಷೇತ್ರದ ಮೂಲಭೂತ ಸೌಕರ್ಯಗಳಲ್ಲಿ ಗುಣಾತ್ಮಕ ಮತ್ತು ಗಮನಾರ್ಹ ಅಭಿವೃದ್ಧಿ ತರಲು ಕಾರಣವಾಗಿವೆ. ಭಾರತ ದೇಶದಲ್ಲಿ ಕಳೆದ 10 ತಿಂಗಳ ಅವಧಿಯಲ್ಲಿ 100 ಕೋಟಿ ಕೋವಿಡ್ ಲಸಿಕೆ ನೀಡಿರುವುದು ಸಾಮಾನ್ಯ ಸಾಧನೆಯಲ್ಲ. ಇದಕ್ಕಾಗಿ ಹೆಮ್ಮೆ ಪಡೋಣ; ಆದರೆ ವಿಶ್ರಮಿಸುವುದು ಬೇಡ ಎಂದು ಅವರು ತಿಳಿಸಿದರು.
ವಿಪತ್ತನ್ನು ಕೂಡ ಅವಕಾಶವನ್ನಾಗಿ ಪರಿವರ್ತಿಸಿಕೊಳ್ಳಬೇಕು ಎಂಬ ಮಾತನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶ ನಿಜ ಮಾಡಿ ತೋರಿಸಿದೆ.ಕೋವಿಡ್ ವೈರಾಣು ಕಾಲಿಟ್ಟಾಗ ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪಿಪಿಇ ಕಿಟ್,ಮಾಸ್ಕ್, ಕೈಗವಸುಗಳಿರಲಿಲ್ಲ. ಇಂದು ಈ ಉತ್ಪನ್ನಗಳನ್ನಷ್ಟೇ ಅಲ್ಲ, ಕೋವಿಡ್ ಲಸಿಕೆಯನ್ನು ಕೂಡ ರಫ್ತು ಮಾಡುವ ಸಾಮರ್ಥ್ಯ ಗಳಿಸಿಕೊಂಡಿದ್ದೇವೆ. ಭಾರತದ ಈ ಸಾಧನೆಗೆ ವಿಶ್ವವೇ ಬೆರಗಾಗಿದೆ ಎಂದು ನುಡಿದರು.
ಕಳೆದ ಜನವರಿ 16 ರಿಂದ ದೇಶದಲ್ಲಿ ಕೋವಿಡ್ ಲಸಿಕೆ ನೀಡಲು ಪ್ರಾರಂಭಿಸಲಾಯಿತು. ಹಂತ ಹಂತವಾಗಿ ಹೆಚ್ಚಳ ಮಾಡುತ್ತ ಇದೀಗ ಕೇವಲ ಹತ್ತು ತಿಂಗಳ ಅವಧಿಯಲ್ಲಿ 100 ಕೋಟಿ ಲಸಿಕೆ ನೀಡಿರುವುದು ಸಾಮಾನ್ಯ ಸಾಧನೆಯಲ್ಲ. ಇದರ ಹಿಂದೆ ವೈದ್ಯರು, ಅರೆವೈದ್ಯಕೀಯ, ಆರೋಗ್ಯ ಕಾರ್ಯಕರ್ತರ, ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಯ ಶ್ರಮವಿದೆ.ಈ ಸಂದರ್ಭದಲ್ಲಿ ಅವರೆಲ್ಲರನ್ನೂ ಅಭಿನಂದಿಸುವುದಾಗಿ ತಿಳಿಸಿದರು.
ಇನ್ನು 3-4 ತಿಂಗಳ ಅವಧಿಯಲ್ಲಿ ಮತ್ತೆ ನೂರು ಕೋಟಿ ಲಸಿಕೆ ನೀಡುವ ಗುರಿ ಹಾಕಿಕೊಳ್ಳಲಾಗಿದೆ. ರಾಜ್ಯದಲ್ಲಿಯೂ ಡಿಸೆಂಬರ್ ಅಂತ್ಯದ ವೇಳೆಗೆ ಶೇ. 90 ರಷ್ಟು ಜನರಿಗೆ ಮೊದಲ ಡೋಸ್ ಹಾಗೂ ಶೇ. 70 ರಷ್ಟು ಎರಡನೇ ಡೋಸ್ ಲಸಿಕೆ ನೀಡುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ ಎಂದರು.