ಸುದ್ದಿಒನ್, ಚಿತ್ರದುರ್ಗ, ನವೆಂಬರ್. 15 : ನಗರದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿಂದು 70ನೇ ಕನ್ನಡ ರಾಜ್ಯೋತ್ಸವ”ವನ್ನು ಆಚರಿಸಲಾಯಿತು.
ಕುವೆಂಪು ವಿಶ್ವದ್ಯಾನಿಲಯದ ಪ್ರಾಧ್ಯಾಪಕ ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಕರ್ನಾಟಕದ ವಿಶೇಷತೆಯ ಬಗ್ಗೆ ಸವಿವರವಾಗಿ ವಿವರಿಸಿದರು. ಕನ್ನಡ ನಾಡು – ನುಡಿಯ ಬಗ್ಗೆ ಅಪಾರ ಗೌರವವನ್ನು ಹೊಂದಿರುವ ಇವರು ಕರ್ನಾಟಕದ ವಚನಕಾರರು, ಕೀರ್ತನಕಾರರು, ಸಾಹಿತಿಗಳು ಹಾಗೂ ಕನ್ನಡ ಸಾಹಿತ್ಯ ಪಡೆದ ಪ್ರಶಸ್ತಿಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಮಾನವ ಕುಲಂ ತಾನೊಂದೆ ವಲಂ” ಎಂದು ಹೇಳಿದ ಕುವೆಂಪು ಅವರಿಂದ ಹಿಡಿದು ಪ್ರೀತಿ ಇಲ್ಲದ ಮೇಲೆ ಹೂವು ಅರಳಿತು ಹೇಗೆ? ಎಂದು ಬರೆದ ಚಂಪ ಅವರ ಬಗೆಗೆ ವಿವರಿಸಿದರು.
ಚಿತ್ರದುರ್ಗದ ಬಗ್ಗೆ ತಾವೇ ರಚಿಸಿದ ಪದ್ಯವಾದ “ನೋಡು ಬಾ ಚಿತ್ರದುರ್ಗವ” ಎಂಬ ಪದ್ಯವನ್ನು ಹೇಳಿದರು. ಜೀವನದಲ್ಲಿ ಒಮ್ಮೆಯಾದರೂ ನಮ್ಮ ಉಕ್ಕಿನ ಕೊಟೆಯಾದ ಚಿತ್ರದುರ್ಗವನ್ನು ನೋಡಬೇಕು ಎಂದು ತಿಳಿಸಿದರು. ಈ ಚಿತ್ರದುರ್ಗಕ್ಕೆ ಇದ್ದಂತಹ ಪುರಾತನ ಹೆಸರುಗಳಾದ ಚಿತ್ತಾರದುರ್ಗ, ಚಿತ್ರಕಲ್ಲುದುರ್ಗ, ಹಿಡಿಂಬ ನಗರ ಇವುಗಳ ಬಗ್ಗೆ ಮಾಹಿತಿ ನೀಡಿದರು.
ನಂತರ ಮತ್ತೊಬ್ಬ ಅತಿಥಿಗಳಾಗಿ ಆಗಮಿಸಿದ ಚಿಕ್ಕಪ್ಪನಹಳ್ಳಿ ಷಣ್ಮುಖ ಹಿರಿಯ ಪತ್ರಕರ್ತರು ಮಾತನಾಡುತ್ತಾ ಪ್ರತಿಯೊಬ್ಬ ವಿದ್ಯಾರ್ಥಿಯ ಪೋಷಕರು ಆಸೆ ಒಂದೇ ಆಗಿರುತ್ತದೆ. ಅದು ತಮ್ಮ ಮಕ್ಕಳು ಉತ್ತಮ ಪ್ರಜೆಗಳಾಗಬೇಕೆಂದು, ಅಷ್ಟೇ ಅಲ್ಲದೇ ತಮ್ಮ ಮಕ್ಕಳು ಇಂಜಿನಿಯರ್ ಅಥವಾ ವೈದ್ಯರೇ ಆಗಬೇಕು ಎಂದು ಕನಸು ಕಂಡರೆ ನಮ್ಮ ದೇಶದಲ್ಲಿ ಪ್ರಜೆಗಳೇ ಇರುವುದಿಲ್ಲ, ಎಲ್ಲಾ ಪದವಿ ಪಡೆದಂತವರು ವಿದೇಶಕ್ಕೆ ಹೋಗಿ ನೆಲೆಸುತ್ತಾರೆ. ತಾವು ವಿದ್ಯಾಭ್ಯಾಸಮಾಡುವ ಸಂದರ್ಭದಲ್ಲಿ ವಿದ್ಯೆ ಎಂಬುದು ತುಂಬಾ ಕಠಿಣವಾಗಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನವು ಅತ್ಯಂತ ಮುದುವರೆದ ಕಾರಣ ತುಂಬ ಸುಲಭವಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್‍ಗಳಿಗೆ ಹೆಚ್ಚು ದಾಸರಾಗುತ್ತಿದ್ದಾರೆ. ಅದರ ಬದಲಾಗಿ ಪ್ರತಿನಿತ್ಯ ದಿನಪತ್ರಿಕೆಯನ್ನು ಓದಿ ಇದರಿಂದ ವಿದ್ಯಾರ್ಥಿಗಳಲ್ಲಿ ಜ್ಞಾನದ ವಿಕಾಸವಾಗುತ್ತದೆ ಎಂದು ತಿಳಿಸಿದರು. ಹಾಗೆಯೇ “ಸಾಲುಮರದ ತಿಮ್ಮಕ್ಕ ವಿದ್ಯೇ”ಯನ್ನು ಕಲಿಯದೇ ರಾಷ್ಟ್ರಪ್ರಶಸ್ತಿಯನ್ನು ಪಡೆದು ಎಲ್ಲರಿಗೂ ಮಾದರಿಯಾಗಿದ್ದರೆ ಅವರÀ ಜೀವನ ನಡೆಸಿದ ರೀತಿ ಹಾಗೂ ಸು.8000 ಸಾವಿರ ಮರಗಳನ್ನು ಸಾಕಿ ಪರಿಸರ ಕಾಪಾಡಿದ ವಿಧಾನ ಎಲ್ಲರಿಗೂ ಒಂದು ಮಾದರಿ ಎಂದು ತಿಳಿಸಿಕೊಟ್ಟರು. ಹಾಗೂ ಸಾಹಿತ್ಯ, ಸಂಗೀತ, ನೃತ್ಯ, ಶಿಲ್ಪಕಲೆ ಎಲ್ಲಾ ಕ್ಷೇತ್ರಗಳಲ್ಲಿ ಚಿತ್ರದುರ್ಗ ಸಾಧನೆ ಮಾಡಿದೆ. ಅಷ್ಟೇ ಅಲ್ಲದೇ ಒನಕೆ ಓಬವ್ವನ ಸಾಹಸದ ಕುರಿತು ‘ಇಳಿದು ಬಾ ಒನಕೆ ಓಬವ್ವ ಇಳಿದು ಬಾ’ ಎಂದು ಒಂದು ಹಾಡನ್ನು ಹಾಡಿದರು. ವಿದ್ಯಾರ್ಥಿಗಳ ಸಾಧನೆ ‘ಆಕಾಶ ಮುಟ್ಟಲಿ ವಿದ್ಯಾರ್ಥಿಗಳು ಅಭಿವೃದ್ದಿ ಹೊಂದಲಿ’ ಎಂದು ಹಾರೈಸಿದರು.
ಸಂಸ್ಥೆಯ ಐಸಿಎಸ್‍ಇ ಪ್ರಾಚಾರ್ಯರಾದ ಬಸವರಾಜಯ್ಯ.ಪಿ ಪ್ರಾವಿಕನುಡಿಗಳನ್ನು ಹೇಳುತ್ತ್ತಾ ‘ಜನನಿ ಜನ್ಮಭೂಮಿಶ್ಚ ಸ್ವರ್ಗದಪಿ ಗರೀಯಸಿ” ಎಂಬ ಶ್ಲೋಕದಂತೆ “ತಾಯಿ ಮತ್ತು ಮಾತೃಭೂಮಿ ಸ್ವರ್ಗಕ್ಕಿಂತ ಮಿಗಿಲು” ಸದಾ ಪೂಜ್ಯನೀಯವಾದದು ನಾವು ಅದಕ್ಕೆ ತುಂಬಾ ಗೌರವವನ್ನು ಕೊಡಬೇಕು ಎಂದರು. ಕನ್ನಡ ಎನೆ ಕುಣಿದಾಡುವುದೆನ್ನೆದೆ ಕನ್ನಡ ಎನೆ ಕಿವಿನಿಮಿರುವುದು ಎಂಬ ಕವಿ ಕುವೆಂಪುರವರ ಪದ್ಯವನ್ನು ಹೇಳಿದರು. ಕನ್ನಡ ಓದಲು ಮತ್ತು ಬರೆಯಲು ಎಷ್ಟು ಸುಲಭ ಎಂಬುದಕ್ಕೆ ಕವಿ ಮಹಾಲಿಂಗ ರಂಗ ಅವರ ಪದ್ಯವಾದ ‘ಕನ್ನಡ ಸುಲಿದ ಬಾಳೆಯ ಹಣ್ಣನಂದದಿ, ಕಳೆದ ಸಿಗುರಿನ ಕಬ್ಬಿನಂದದಿ, ಹಳಿದ ಉಷ್ಣದ ಹಾಲಿನಂತೆ’ ನಮ್ಮ ಕನ್ನಡ ಕಲಿಯುವುದು ತುಂಬಾ ಸರಳ ಎಂದು ಹೇಳಿದರು.
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಎಸ್ ಎಂ ಪೃಥ್ವೀಶ ಅವರು ಮಾತನಾಡುತ್ತಾ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮುಗಿಸಿದ ನಂತರ ಕನ್ನಡ ಭಾಷೆಗೆ ತಮ್ಮ ಕೊಡುಗೆ ಏನು ಕೊಡಬೇಕು ಎಂದು ಪ್ರತಿಯೊಬ್ಬರು ಯೋಚಿಸಬೇಕು. ಯಾವುದೇ ರಂಗದಲ್ಲಿ ನೋಡಿದರು ನಮ್ಮ ಕನ್ನಡಿಗರ ಸಾಧನೆ ಆಪಾರ ಎಂದರು, ಅಷ್ಟೇ ಅಲ್ಲದೇ ಬೇರೆ ಬೇರೆ ದೇಶಗಳಲ್ಲಿ ಕನ್ನಡ ಭಾಷೆ ಸಂಬಂಧಿಸಿದ ಕನ್ನಡ ಸಂಘಗಳನ್ನು ನಡೆಸಿಕೊಂಡು ಹೋಗುವ ಮೂಲಕ ಕನ್ನಡ ಭಾಷೆಯ ಸೊಬಗನ್ನು ಎತ್ತಿ ಹಿಡಿದ್ದಾರೆ ಎಂದರು. “ಎಲ್ಲಾದರೂ ಇರು ಎಂತಾದರೂ ಇರು, ಎಂದೆದಿಗೂ ನೀ ಕನ್ನಡವಾಗಿರು” ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಅಷ್ಟೇ ಅಲ್ಲದೇ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದರೆ ಮೊದಲು ಕನ್ನಡ ದಿನಪ್ರತಿಕೆ ಓದುವ ಅಭ್ಯಾಸವನ್ನು ಬೆಳಸಿಕೊಳ್ಳಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಎನ್.ಜಿ.ತಿಪ್ಪೇಸ್ವಾಮಿ ಅವರು ಮಾತನಾಡುತ್ತಾ ಕ್ರಿ.ಶ.1956 ನವೆಂವರ್ 1 ಕನ್ನಡ ರಾಜ್ಯೋತ್ಸವವನ್ನು ಆಚರಿಸುವ ಸುದಿನ. ಈ ಕನ್ನಡ ಮಾತನಾಡುವ ಪ್ರದೇಶಗಳನ್ನ ಒಂದಾಗಿಸಿ ಒಂದು ಕರ್ನಾಟಕ ರಾಜ್ಯವನ್ನಾಗಿಸಿದ ಸುದಿನ. ಅಷ್ಟೇ ಅಲ್ಲದೇ ಮೈಸೂರು ಅನ್ನು ಕರ್ನಾಟಕ ಎಂದು ಮರುನಾಮಕರಣ ಮಾಡಿದ್ದು ಇದೇ ದಿನ ನಮ್ಮ ನಾಡಿನ ಗೌರವ, ಸಂಸ್ಕೃತಿ ಮತ್ತು ಅಸ್ತಿತ್ವವನ್ನು ಜಗತ್ತಿಗೆ ಸಾರಿದ ದಿನ. ಕರ್ನಾಟಕದ ಇತಿಹಾಸ ಅತೀ ಪ್ರಾಚೀನ, ಕದಂಬರು ಕನ್ನಡದಲ್ಲಿ ಆಡಳಿತವನ್ನ ನಡೆಸಿರುವ ಮೊದಲ ರಾಜವಂಶ, ಚಾಲುಕ್ಯರು ಬಾದಾಮಿ ಐಹೊಳೆ ಪಟ್ಟದಕಲ್ಲು ಹೊಯ್ಸಳರು, ಬೇಲೂರು, ಬಾದಾಮಿ ಮುಂತಾದ ರಾಜವಂಶಜರು ಕಲ್ಲಿಗೆ ಜೀವವನ್ನು ತುಂಬಿದವರು. ವಿಜಯನಗರದ ಸಾಮ್ರಾಜ್ಯ ಸಾಹಿತ್ಯ, ಸಂಗೀತ, ಆಡಳಿತಕ್ಕೆ ಚಿನ್ನದ ಯುಗವನ್ನು ನೀಡಿದವರು. ಈ ನೆಲದಲ್ಲಿ ಬಸವಣ್ಣ, ಅಕ್ಕಮಹಾದೇವಿ, ಮಧ್ವಚಾರ್ಯರು, ಶಿಶುನಾಳ ಷರೀಫರು, ವಿಶ್ವೇಶ್ವರಯ್ಯ, ಮುಂತಾದ ಮಹನೀಯರು ಜನ್ಮವೆತ್ತಂತಹ ನಾಡು ನಮ್ಮ ಕನ್ನಡ ನಾಡು ಅದರ ಸವಿ ನೆನಪಿಗಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ, ಸಂಸ್ಥೆಯ ಕಾರ್ಯದರ್ಶಿಯವರಾದ ಬಿ.ವಿಜಯ ಕುಮಾರ್ ಅವರು ಮಾತನಾಡುತ್ತಾ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕಗಳನ್ನು ವಿದ್ಯಾರ್ಥಿಗಳನ್ನು ಸಾಧನೆಗೆ ಮೆಚ್ಚುಗೆಯನ್ನು ವ್ಯಕ್ಯಪಡಿಸುತ್ತಾ ನಂತರ ಎಲ್.ಕೆ.ಜಿ ಯಿಂದ 10ನೇ ತರಗತಿಯವರೆಗೆ ಈ ವಿದ್ಯಾರ್ಥಿಗಳಿಗೆ ಸಾಧನೆ ಮಾಡಲು ಸಹಕರಿಸಿದ ಎಲ್ಲಾ ಶಿಕ್ಷಕರಿಗೂ ಅಭಿನಂದನೆಗಳನ್ನು ಸಲ್ಲಿದರು. ಹಾಗೂ ಒಬ್ಬ ವಿದ್ಯಾರ್ಥಿಗಳ ಜೀವನದಲ್ಲಿ ಕನ್ನಡ ದಿನ ಪತ್ರಿಕೆಯನ್ನು ಪ್ರತಿ ದಿನ ಓದಿ ಇದರಿಂದ ಅತ್ಯಂತ ಜ್ಞಾನ
ದೊರೆಯುತ್ತದೆ ಅಷ್ಟೇ ಅಲ್ಲದೇ ಒಬ್ಬರಿಂದ ಮತ್ತೋಬ್ಬರ ಜ್ಞಾನ ವೃದ್ಧಿಯಾಗುತ್ತದೆ ಇದರಿಂದ ಮೊಬೈಲನ್ನು ದೂರಮಾಡಲು ಸಹಕಾರಿಯಾಗಿ ಓದುವ ಅಭ್ಯಾಸ ಹೆಚ್ಚು ಮಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದರು.
2024-25ನೇ ಸಾಲಿನಲ್ಲಿ 10ನೇ ತರಗತಿಯಲ್ಲಿ 125ಕ್ಕೆ 125 ಅಂಕಗಳನ್ನು ಗಳಿಸಿದ 9 ವಿದ್ಯಾರ್ಥಿಗಳಿಗೆ
‘ಕನ್ನಡ ಮಾಣಿಕ್ಯ’ ಎಂಬ ಬಿರುದನ್ನು ನೀಡಿ ಗೌರವಿಸಲಾಯಿತು.
ಇದೇ ವೇಳೆ ನೆಲ್ಲಿಕಟ್ಟೆ.ಎಸ್.ಸಿದ್ದೇಶ್ ಹಾಗೂ ಚಿಕ್ಕಪ್ಪನಹಳ್ಳಿ ಷಣ್ಮುಖ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಶಿಕ್ಷಕರಿಗೆ ಆಯೋಜಿಸಿದ್ದ “ಕನ್ನಡ ರಸಪ್ರಶ್ನೆ ಸ್ಪರ್ಧೆಯಲ್ಲಿ” ವಿಜೇತರಾದ ಶಿಕ್ಷಕ/ಶಿಕ್ಷಕಿಯರಿಗೆ ಬಹುಮಾನ ವಿತರಿಸಲಾಯಿತು, ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರುಗಳಾದ ಜಾನವಿ ಸ್ವಾಗತಿಸಿದರು, ಉಷಾ ಮತ್ತು ಸಿರಿಗೌರಿ ಪಿ.ಶೆಟ್ಟಿ ನಿರೂಪಿಸಿದರು, ದೀಕ್ಷಿತಾ ಎಂ ವಂದಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ಸುನೀತಾ.ಪಿ.ಸಿ ಹಾಗೂ ಆಡಳಿತ ಮಂಡಳಿಯ ಸದಸ್ಯರು, ಶಾಲೆಯ ಶಿಕ್ಷಕ/ಶಿಕ್ಷಕೇತರ ವೃಂದದವರು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.


