ಚಿತ್ರದುರ್ಗ : ಶೇ.7.5 ರಷ್ಟು ಮೀಸಲಾತಿಗಾಗಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಸ್ವಾಮಿಗಳು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಅಹೋರಾತ್ರಿ ನಡೆಸುತ್ತಿರುವ ಧರಣಿಗೆ ಬೆಂಬಲಿಸಿ ನಾಯಕ ಸಮಾಜ ಹಾಗೂ ಪರಿಶಿಷ್ಟ ಜಾತಿಯವರು ಜೊತೆಗೂಡಿ ನಗರದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಗಾಂಧಿವೃತ್ತದಿಂದ ಮೆರವಣಿಗೆ ಮೂಲಕ ಒನಕೆ ಓಬವ್ವ ವೃತ್ತಕ್ಕೆ ಆಗಮಿಸಿದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಜೆಡಿಎಸ್.ಜಿಲ್ಲಾಧ್ಯಕ್ಷ ಡಿ.ಯಶೋಧರ ಶೇ.7.5 ಮೀಸಲಾತಿಗಾಗಿ ಪ್ರಸನ್ನಾನಂದಸ್ವಾಮಿಗಳು ಕಳೆದ ನೂರು ದಿನಗಳಿಂದ ಧರಣಿ ನಡೆಸುತ್ತಿದ್ದರು ರಾಜ್ಯ ಸರ್ಕಾರ ನಾಯಕ ಸಮಾಜವನ್ನು ನಿರ್ಲಕ್ಷೆ ಮಾಡುತ್ತಿದೆ.
ನ್ಯಾಯಯುತವಾದ ಹಕ್ಕುಗಳಿಗಾಗಿ ನಾಯಕ ಸಮಾಜ ಬೀದಿಗಿಳಿದು ಹೋರಾಡಬೇಕಾಗಿದೆ. ಹೆಚ್.ಡಿ.ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ನಾಗಮೋಹನ್ ದಾಸ್ ಆಯೋಗ ರಚಿಸಿ ಅದರ ವರದಿಯನ್ವಯ ಮೀಸಲಾತಿ ದೊರಕಿಸುವ ಆಶ್ವಾಸನೆ ಕೊಟ್ಟಿದ್ದರು. ಕೇಂದ್ರ ಮತ್ತು ರಾಜ್ಯ ಬಿಜೆಪಿ.ಸರ್ಕಾರದ ವರ್ತನೆ ಸರಿಯಲ್ಲ. ರಾಜ್ಯ ಬಿಜೆಪಿ.ಸರ್ಕಾರ ನಿಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದೆ ಬೆಲೆ ತೆರಬೇಕಾಗುತ್ತದೆಂದು ಎಚ್ಚರಿಸಿದರು.
ಜಿಲ್ಲಾ ನಾಯಕ ಸಮಾಜದ ಅಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ ಮಾತನಾಡಿ ನಾಯಕ ಸಮಾಜಕ್ಕೆ ಶೇ.7.5 ಮೀಸಲಾತಿಗಾಗಿ ನಮ್ಮ ಸ್ವಾಮೀಜಿ ಧರಣಿ ಕುಳಿತು ಇಂದಿಗೂ ನೂರು ದಿನಗಳಾಗಿವೆ. ಆದರೂ ರಾಜ್ಯದ ಮುಖ್ಯಮಂತ್ರಿಗಳು ಧರಣಿ ಸ್ಥಳಕ್ಕೆ ಆಗಮಿಸುವ ಸೌಜನ್ಯ ತೋರುತ್ತಿಲ್ಲದಿರುವುದು ಜನಾಂಗದ ತಾಳ್ಮೆ ಕೆಡಿಸಿದೆ. ಈಗಲಾದರೂ ಎಚ್ಚೆತ್ತುಕೊಂಡು ಮೀಸಲಾತಿಯನ್ನು ಕೊಡದಿದ್ದರೆ ಮುಂದೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದೆಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಮಾತನಾಡುತ್ತ ಶೇ.7.5 ಮೀಸಲಾತಿಗಾಗಿ ಪ್ರಸನ್ನಾನಂದಸ್ವಾಮಿಗಳು ನೂರು ದಿನಗಳಿಂದಲೂ ಧರಣಿ ನಡೆಸುತ್ತಿದ್ದರೂ ಆಡಳಿತ ರೂಢ ರಾಜ್ಯ ಬಿಜೆಪಿ. ಸರ್ಕಾರ ಸ್ವಾಮೀಜಿಗಳ ಬಳಿ ಬಂದು ಮಾತನಾಡಬಹುದಿತ್ತು.
ಎಲ್.ಜಿ.ಹಾವನೂರ್, ಭೀಮಪ್ಪನಾಯಕ, ಹೋಚಿ.ಬೋರಯ್ಯ, ಇವರುಗಳನ್ನು ಈ ಸಂದರ್ಭದಲ್ಲಿ ಎಸ್ಸಿ, ಎಸ್ಟಿ.ಗಳು ಸ್ಮರಿಸಿಕೊಳ್ಳಲೇಬೇಕು. ನಾಯಕ ಸಮಾಜದ ಶಾಸಕರು, ಸಚಿವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಹೊರಬರಬಹುದಿತ್ತು. ಇದ್ಯಾವುದನ್ನು ಮಾಡುತ್ತಿಲ್ಲ. ಸರ್ಕಾರ ಈಗಲಾದರೂ ಕಣ್ತೆರೆದರೆ ಒಳ್ಳೆಯದು ಎಂದು ಹೇಳಿದರು.
ತಾಲ್ಲೂಕು ನಾಯಕ ಸಮಾಜದ ಅಧ್ಯಕ್ಷ ಬಿ.ಕಾಂತರಾಜ್ ಮಾತನಾಡಿ ಕೇಂದ್ರ ಸರ್ಕಾರ ನಾಯಕ ಜನಾಂಗಕ್ಕೆ ಮೀಸಲಾತಿ ಕೊಟ್ಟಿದೆ. ರಾಜ್ಯ ಸರ್ಕಾರ ಶೇ.7.5 ಮೀಸಲಾತಿ ಕೊಡಲು ಇನ್ನು ಮೀನಾಮೇಷ ಎಣಿಸುತ್ತಿದೆ. ಇದು ಅಷ್ಟು ಸುಲಭವಾಗಿ ಸಿಗುವ ಸರಕಲ್ಲ. ಮೀಸಲಾತಿಗಾಗಿ ವರ್ಷಗಟ್ಟಲೆ ಧರಣಿ ನಡೆಸಲು ನಮ್ಮ ಸ್ವಾಮಿಗಳು ಸಿದ್ದರಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಶಕ್ತಿಯಾಗಿ ನಿಲ್ಲಬೇಕು. ನಾಯಕ ಸಮಾಜದ ಶಾಸಕರು, ಸಚಿವರು ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡಿ ಹೊರಬಂದಿದ್ದರೆ ನಾವು ಬೀದಿಗಿಳಿಯುವ ಅಗತ್ಯವಿರುತ್ತಿರಲಿಲ್ಲ. ನಮ್ಮವರ ತಪ್ಪು ಸಾಕಷ್ಟಿದೆ. ಅದಕ್ಕಾಗಿ ಮುಂದೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲು ಎಲ್ಲರೂ ಸಿದ್ದರಿರಬೇಕೆಂದು ಕರೆ ಕೊಟ್ಟರು.
ನಮಗೆ ಯಾರು ನ್ಯಾಯ ಕೊಡುತ್ತಾರೋ ಅಂತಹವರ ಪರವಾಗಿ ನಿಲ್ಲಬೇಕು. ಸರ್ಕಾರ ನಿರ್ಲಕ್ಷೆ ಮಾಡುತ್ತಿರುವುದರಿಂದ ಮುಂದಿನ ಚುನಾವಣೆಯಲ್ಲಿ ಮತದಾನದ ಮೂಲಕ ತಕ್ಕಪಾಠ ಕಲಿಸಬೇಕಾಗುತ್ತದೆ. ಈಗ ನಮಗೆ ಮೀಸಲಾತಿ ಸಿಗದಿದ್ದರೆ ಮುಂದಿನ ಪೀಳಿಗೆ ಕಷ್ಟ ಅನುಭವಿಸಬೇಕಾಗುತ್ತದೆನ್ನುವುದನ್ನು ಎಲ್ಲರೂ ಗಮನದಲ್ಲಿಟ್ಟುಕೊಳ್ಳಬೇಕು ಎಂದರು.
ನಗರಸಭೆ ಸದಸ್ಯ ವೆಂಕಟೇಶ್, ಹೆಚ್.ಅಂಜಿನಪ್ಪ, ಮದಕರಿನಾಯಕ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಸಂದೀಪ್, ಕಲ್ಲವ್ವನಾಗತಿಹಳ್ಳಿ ತಿಪ್ಪೇಸ್ವಾಮಿ, ರತ್ನಮ್ಮ, ಶ್ರೀನಿವಾಸ ನಾಯಕ ಇವರುಗಳು ಮಾತನಾಡಿದರು.
ನಗರಸಭೆ ಅಧ್ಯಕ್ಷೆ ಶ್ರೀಮತಿ ತಿಪ್ಪಮ್ಮ, ಸದಸ್ಯ ದೀಪು, ಅಂಗಡಿ ಮಂಜಣ್ಣ, ಡಿ.ಗೋಪಾಲಸ್ವಾಮಿ ನಾಯಕ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್.ನರಸಿಂಹರಾಜ, ನಗರಸಭೆ ಮಾಜಿ ಸದಸ್ಯರುಗಳಾದ ಸಿ.ಟಿ.ರಾಜೇಶ್, ತಿಪ್ಪೇಸ್ವಾಮಿ, ಎ.ಟಿ.ಎಸ್.ತಿಪ್ಪೇಸ್ವಾಮಿ. ಸಿರಿಗೆರೆ ತಿಪ್ಪೇಶ್, ಕಾಟಿಹಳ್ಳಿ ಕರಿಯಪ್ಪ, ಕಾಂಗ್ರೆಸ್‍ನ ಕೆ.ಪಿ.ಸಂಪತ್‍ಕುಮಾರ್, ನ್ಯಾಯವಾದಿ ಅಶೋಕ್‍ಬೆಳಗಟ್ಟ, ಸರ್ವೆಬೋರಣ್ಣ ಸೇರಿದಂತೆ ನಾಯಕ ಹಾಗೂ ಎಸ್ಸಿ ಸಮುದಾಯದ ಅನೇಕ ಮುಖಂಡರುಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.