ಬೆಂಗಳೂರು: ರಾಜ್ಯ ಸಾರಿಗೆ ಇಲಾಖೆ ಹಳೆ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಸುವುದಕ್ಕೆ ಸೂಚನೆ ನೀಡಿದೆ. ಈ ಸಂಬಂಧ ಇದೀಗ ಆರನೇ ಬಾರಿಗೆ ನಂಬರ್ ಪ್ಲೇಟ್ ಅಳವಡಿಕೆಗೆ ಗಡುವು ನೀಡಿದೆ. ವಾಹನ ಮಾಲೀಕರು ಈ ಸಲ ಆದರೂ ನಂಬರ್ ಪ್ಲೇಟ್ ಅಳವಡಿಸಲು ಸೂಚನೆ ನೀಡಿದ್ದಾರೆ. ವಾಹನ ಸವಾರರಿಗೆ ರಾಜ್ಯ ಸರ್ಕಾರ ಮತ್ತೊಂದು ಅವಕಾಶ ನೀಡಿದ್ದು, ಈ ತಿಂಗಳ ಕೊನೆ ಅಂದ್ರೆ ಜನವರಿ 31ರವರೆಗೂ ಮತ್ತೊಂದು ಅವಕಾಶ ನೀಡಿದೆ. ಈ ತಿಂಗಳ ಕೊನೆಯೊಳಗೆ ಹಳೆಯ ಗಾಡಿಗಳಿಗೆ HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕಾಗಿದೆ.
2019ಕ್ಕೂ ಮೊದಲು ಖರೀದಿ ಮಾಡಿರುವ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕಾಗಿದೆ. ಭದ್ರತೆ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಮೋಟಾರು ವಾಹನ ಕಾಯ್ದೆ 1989 ಸೆಕ್ಷನ್ 50 ಹಾಗೂ 51ರ ಅನ್ವಯ ಎಲ್ಲಾ ವಾಹನಗಳಿಗೂ ಗರಿಷ್ಠ ಭದ್ರತೆಯ ನಂಬರ್ ಪ್ಲೇಟ್ ಗಳನ್ನು ಅಳವಡಿಸಬೇಕಿದೆ. HSRP ಎಂದರೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಎಂದರ್ಥ.
ಈ ಹೈ ಸೆಕ್ಯುರಿಟಿ ಪ್ಲೇಟ್ ಹಾಕಿಸದೆ ಹೋದರೆ ಆ ಗಾಡಿಯನ್ನು ಮಾರುವುದಕ್ಕೆ ಸಾಧ್ಯವಾಗುವುದಿಲ್ಲ. ಮಾಲೀಕತ್ವದ ಬದಲಾವಣೆಯಾಗಲಿ, ವಿಳಾಸ ಬದಲಾವಣೆಯಾಗಲಿ, ನಕಲಿ ಆರ್ಸಿ, ವಿಮೆ ಹಾಗೂ ಇನ್ನಿತರ ಯಾವುದೇ ಕೆಲಸಗಳನ್ನು ಮಾಡಲಾಗುವುದಿಲ್ಲ. ಸಾರಿಗೆ ಇಲಾಖೆ ಹೊರಡಿಸಿರುವ ಈ ಸೂಚನೆಯಿಂದ ರಸ್ತೆಯಲ್ಲಿ ಅಧಿಕೃತವಾಗಿಲ್ಲದ ವಾಹನಗಳು ಓಡಾಡುವುದನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ಹೀಗಾಗಿ ಈ ತಿಂಗಳು ಮುಗಿಯುವುದರೊಳಗೆ ಯಾರೆಲ್ಲಾ ನಂಬರ್ ಪ್ಲೇಟ್ ಅಳವಡಿಸಿಕೊಂಡಿಲ್ಲ, ಆದಷ್ಟು ಬೇಗ ಹೊಸ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಿ.