ಕೊಡಗು: ಇತ್ತಿಚೆಗೆ ಹಾರ್ಟ್ ಅಟ್ಯಾಕ್ ಅನ್ನೋದು ಕಾಮನ್ ಆಗಿ ಬಿಟ್ಟಿದೆ. ಹೃದಯಾಘಾತವಾದಾಗೆಲ್ಲ ಈಗಿನ ಜೀವನ ಶೈಲಿ, ಕೆಲಸದ ಒತ್ತಡ ಎಂಬ ವಿಚಾರಗಳು ಚರ್ಚೆಗೆ ಬರುತ್ತವೆ. ಆದ್ರೆ ಇತ್ತಿಚೆಗೆ ವಯಸ್ಸಿನ ಅಂತರವೇ ಇಲ್ಲದಂತೆ ಹೃದಯಾಘಾತವಾಗುತ್ತಿದೆ. ಕೊಡಗು ಜಿಲ್ಲೆಯಲ್ಲಿ ಆರನೇ ತರಗತಿ ವಿದ್ಯಾರ್ಥಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಸ್ಥಳೀಯರಿಗೆ ಆತಂಕವನ್ನುಂಟು ಮಾಡಿದೆ.

ಕುಶಾಲನಗರ ತಾಲೂಕಿನ ಕೂಡುಮಂಗಳೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. 12 ವರ್ಷದ ಕೀರ್ತನ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಶನಿವಾರ ತಡರಾತ್ರಿ ಕೀರ್ತನ್ ಗೆ ಎದೆನೋವು ಕಾಣಿಸಿಕೊಂಡಿದೆ. ಮಲಗಿದ್ದಲ್ಲಿಯೇ ಜೋರಾಗಿ ಕೂಗಿಕೊಂಡಿದ್ದಾನೆ. ಮಗನ ಚೀರಾಟ ಕಂಡ ಪೋಷಕರು ತಕ್ಷಣ ಆತನನ್ನು ಕುಶಾಲನಗರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದ್ರೆ ಆಸ್ಪತ್ರೆ ತಲುಪುವ ಮುನ್ನವೇ ಕೀರ್ತನ್ ಸಾವನ್ನಪ್ಪಿದ್ದಾನೆ.

12 ವರ್ಷದ ಕೀರ್ತನ್ ಭಾರತ್ ಮಾತಾ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ಅದೇ ಶಾಲೆಯಲ್ಲಿ ಶಾಲಾ ಬಸ್ ಡ್ರೈವರ್ ಆಗಿ ಕೀರ್ತನ್ ತಂದೆ ಕೆಲಸ ಮಾಡುತ್ತಿದ್ದರು. ಇಷ್ಟು ಚಿಕ್ಕ ವಯಸ್ಸಿಗೆ ಮಗನನ್ನು ಕಳೆದುಕೊಂಡ ಪೋಷಕರು ನೋವಿನಲ್ಲಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಬಾಲಕನಿಗೆ ಹೃದಯಾಘಾತವಾಗಿರುವುದು ಜನರಿಗೂ ಶಾಕ್ ಆಗಿದೆ.

