ಧಾರವಾಡ: ಕೊರೊನಾ ಮೂರನೇ ಅಲೆ ಹೆಚ್ಚಾಗುವ ಆತಂಕ ಸ್ವಲ್ಪ ದೂರವಾಗಿದೆ. ಎಲ್ಲರೂ ವ್ಯಾಕ್ಸಿನ್ ಹಾಕಿಸಿಕೊಂಡಿರುವ ಕಾರಣ ಮೂರನೇ ಅಲೆ ಬರೋದು ಕಡಿಮೆ ಅಂತ ತಜ್ಞರು ಹೇಳಿದ್ದಾರೆ. ಆದ್ರೆ ಕೊರೊನಾಗೆ ತುತ್ತಾಗುತ್ತಿರುವ ಜನರನ್ನ ಕಂಡು ಸ್ವಲ್ಪ ಆತಂಕವೂ ಮನೆ ಮಾಡಿದೆ. ಧಾರವಾಡದಲ್ಲಿ ವೈದ್ಯಕೀಯ ಕಾಲೇಜು ಒಂದರಲ್ಲೇ 66 ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿದೆ.
ಜಿಲ್ಲೆಯ ಎಸ್ಡಿಎಂ ಕಾಲೇಜು ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರಿಂದಾಗಿ ಎರಡು ಹಾಸ್ಟೇಲ್ ಗಳನ್ನ ಸೀಲ್ಡೌನ್ ಮಾಡಲಾಗಿದೆ. ಈ ಬಗ್ಗೆ ಮಾತನಾಡಿರುವ ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರು, ಇತ್ತೀಚೆಗೆ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು ಹಾಜರಾಗಿದ್ದರಿಂದ ಕೊರೊನಾ ವೈರಸ್ ಹರಡುವಿಕೆಗೆ ಕಾರಣವಾಗಿದೆ. ಇದರಿಂದ ಪಾಸಿಟಿವ್ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಈ ವೈದ್ಯಕೀಯ ಕಾಲೇಜಿನಲ್ಲಿ ಒಟ್ಟು 400 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಘಟನೆ ಬೆಳಕಿಗೆ ಬಂದ ನಂತರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ.
ಕಾಲೇಜಿಗೆ ದಾಖಲಾಗುವ ಹೆಚ್ಚಿನ ವಿದ್ಯಾರ್ಥಿಗಳು ಬೇರೆ ರಾಜ್ಯಗಳಿಂದ ಬಂದವರು. ಕೊರೊನಾ ಸೋಂಕಿಗೆ ಒಳಗಾದ ಎಲ್ಲ ವಿದ್ಯಾರ್ಥಿಗಳು ಪ್ರಥಮ ವರ್ಷದ ವಿದ್ಯಾರ್ಥಿಗಳು. ಎಸ್‌ಡಿಎಂ ಕಾಲೇಜಿನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ 40 ವೈದ್ಯಕೀಯ ವಿದ್ಯಾರ್ಥಿಗಳು ಈ ಹಿಂದೆ ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದರು. ನಂತರ, ಇತರ ಕೆಲವು ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಿದಾಗ, ಅವರಿಗೂ ಪಾಸಿಟಿವ್ ಆಗಿರುವುದು ಕಂಡುಬಂದಿದೆ ಎಂದಿದ್ದಾರೆ.