ಸುದ್ದಿಒನ್ ವೆಬ್ ಡೆಸ್ಕ್
ನವದೆಹಲಿ : ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ನಳಿನಿ ಶ್ರೀಹರನ್ ಸೇರಿದಂತೆ ಐವರು ಅಪರಾಧಿಗಳನ್ನು 33 ವರ್ಷಗಳ ಜೈಲುವಾಸದ ನಂತರ ಸುಪ್ರೀಂ ಕೋರ್ಟ್ ಬಿಡುಗಡೆ ಮಾಡಿದೆ.
ಮೇ ತಿಂಗಳಲ್ಲಿ, ಏಳನೇ ಅಪರಾಧಿ ಪೆರಾರಿವಾಲನ್‌ನನ್ನು ಬಿಡುಗಡೆ ಮಾಡಲು ಸುಪ್ರೀಂ ಕೋರ್ಟ್ ತನ್ನ ಅಸಾಮಾನ್ಯ ಅಧಿಕಾರವನ್ನು ಬಳಸಿತ್ತು. ಅದೇ ಆದೇಶವು ಉಳಿದ ಅಪರಾಧಿಗಳಿಗೂ ಅನ್ವಯಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಅಪರಾಧಿಗಳನ್ನು ಬಿಡುಗಡೆ ಮಾಡುವಂತೆ ತಮಿಳುನಾಡು ಸರ್ಕಾರ 2018 ರಲ್ಲಿ ರಾಜ್ಯಪಾಲರಿಗೆ ಶಿಫಾರಸು ಮಾಡಿರುವುದನ್ನು ಪರಿಗಣಿಸಿ ನ್ಯಾಯಾಲಯ ಇಂದು ತೀರ್ಪು ನೀಡಿದೆ.
ನಳಿನಿ ಅವರಲ್ಲದೆ, 1991 ರ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹತ್ಯೆಗಾಗಿ ಜೈಲು ಪಾಲಾದ ಇತರರೆಂದರೆ ಶ್ರೀಹರನ್, ಸಂತನ್, ಮುರುಗನ್, ರಾಬರ್ಟ್ ಪಾಯಸ್ ಮತ್ತು ಆರ್‌ಪಿ ರವಿಚಂದ್ರನ್. ಈ ಏಳು ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು.
ಆದರೆ ಈ ಪ್ರಕರಣದಲ್ಲಿ 2000 ರಲ್ಲಿ, ರಾಜೀವ್ ಗಾಂಧಿ ಅವರ ಪತ್ನಿ ಮತ್ತು ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಒಪ್ಪಿಗೆಯ ಮೇರೆಗೆ ನಳಿನಿ ಶ್ರೀಹರನ್ ಅವರ ಶಿಕ್ಷೆಯನ್ನು ಜೀವಾವಧಿಗೆ ಇಳಿಸಲಾಯಿತು.
ರಾಜೀವ್ ಗಾಂಧಿಯವರು ಮೇ 21, 1991 ರಂದು ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ನೆರೆಯ ಶ್ರೀಲಂಕಾದ ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ (ಎಲ್‌ಟಿಟಿಇ) ಗುಂಪಿನ ಮಹಿಳಾ ಆತ್ಮಾಹುತಿ ಬಾಂಬರ್‌ನಿಂದ ಹತ್ಯೆಗೀಡಾಗಿದ್ದರು.
ಇತ್ತ ರಾಜೀವ್ ಗಾಂಧಿ ಹಂತಕರನ್ನು ಬಿಡುಗಡೆಗೊಳಿಸಿದ ಸುಪ್ರೀಂ ಕೋರ್ಟ್ ಆದೇಶಕ್ಕೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಉಳಿದ ಹಂತಕರನ್ನು ಬಿಡುಗಡೆ ಮಾಡಲು ಸುಪ್ರೀಂ ಕೋರ್ಟ್‌ನ ನಿರ್ಧಾರವು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ಕಾಂಗ್ರೆಸ್ ಪಕ್ಷವು ಅದನ್ನು ಒಪ್ಪುವುದಿಲ್ಲ. ಇದು ಅತ್ಯಂತ ದುರದೃಷ್ಟಕರ ಸಂಗತಿಯಾಗಿದೆ ಎಂದು
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ಆಕ್ಷೇಪದ ಹಿನ್ನೆಲೆಯಲ್ಲಿ
ನಳಿನಿ ಶ್ರೀಹರನ್ ಅವರ ಸಹೋದರ ಬಾಕಿನಾಥನ್ ಮಾತನಾಡಿ, ಅಪರಾಧಿಗಳು ಈಗಾಗಲೇ 33 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಿದ್ದಾರೆ ಮತ್ತು ಸಾಕಷ್ಟು ನೋವು ಅನುಭವಿಸಿದ್ದಾರೆ. “ಮಾನವೀಯ ಆಧಾರದ ಮೇಲೆ ಅವರನ್ನು ಬಿಡುಗಡೆ ಮಾಡಲಾಗಿದೆ. ಅವರ ಬಿಡುಗಡೆಯನ್ನು ವಿರೋಧಿಸುವವರು ಭಾರತದ ಕಾನೂನನ್ನು ಗೌರವಿಸಬೇಕು” ಎಂದು ಬಕಿನಾಥನ್ ತಿಳಿಸಿದ್ದಾರೆ.