ಐಪಿಎಲ್ – 2025 ಮೆಗಾ ಹರಾಜು ಪ್ರಕ್ರಿಯೆ ಮುಗಿದಿದೆ. ಈ ಬಾರಿ ಆರ್ಸಿಬಿ ಒಳ್ಳೊಳ್ಳೆ ಆಟಗಾರರನ್ನು ಕೈಬಿಟ್ಟಿದ್ದಕ್ಕೆ ಫ್ಯಾನ್ಸ್ ಮೊದಲೇ ಬೇಸರವಾಗಿದ್ದಾರೆ. ಹೀಗಿರುವಾಗ ಯುವ ವೇಗಿಗೆ ಕೋಟಿಗಟ್ಟಲೇ ಕೊಟ್ಟು ಖರೀದಿ ಮಾಡಿರುವುದಕ್ಕೆ ಮತ್ತೆ ಬೇಸರ ಮಾಡಿಕೊಂಡಿದ್ದಾರೆ. ಯುವ ವೇಗದ ಬೌಲರ್ ರಸಿಖ್ ದಾರ್ ಮೇಲೆ ಆರು ಕೋಟಿ ಹಣ ಸುರಿದಿದೆ ಆರ್ಸಿಬಿ ತಂಡ.
ರಸಿಖ್ ದಾರ್ ಉತ್ತಮ ವೇಗದ ಬೌಲರ್ ಆಗಿದ್ದಾರೆ. ಈ ಹಿಂದೆ ಕೂಡ ಆರ್ಸಿಬಿ ತಂಡದಲ್ಲಿ ಆಡಿದ್ದಾರೆ. ಈಗಾಗಲೇ ಆರ್‌ಸಿಬಿ ಆಸ್ಟ್ರೇಲಿಯಾ ವೇಗದ ಬೌಲರ್ ಜೋಶ್ ಹೆಜಲ್ವುಡ್ ಅವರನ್ನು 12.50 ಕೋಟಿಗೆ ಖರೀದಿ ಮಾಡಿತ್ತು. ಈ ಬೆನ್ನಲ್ಲೇ ಬೌಲಿಂಗ್ ವಿಭಾಗಕ್ಕೆ ಮತ್ತೋರ್ವ ಆಟಗಾರ ರಸಿಖ್ ದಾರ್ ಅವರನ್ನು ಸೇರಿಸಿಕೊಂಡಿದೆ. ರಸಿಖ್ ದಾರ್ ಜಮ್ಮು ಕಾಶ್ಮೀರದವರು. ಆರ್ಸಿಬಿ ತಂಡದಲ್ಲಿದ್ದಾಗ ಹೇಳಿಕೊಳ್ಳುವಂತ ಸಾಧನೆಯನ್ನೇನು ಮಾಡಿಲ್ಲ. ಆಡಿದ 11 ಪಂದ್ಯದಲ್ಲಿ ಕೇವಲ 9 ವಿಕೆಟ್ ಗಳನ್ನು ಪಡೆದಿದ್ದಾರೆ.
ಅನ್ಕ್ಯಾಪ್ಡ್ ಪ್ಲೇಯರ್ ಮೇಲೆ ಕೋಟಿ ಕೋಟಿ ಸುರಿದಿದ್ದಕ್ಕೆ ಆರ್ಸಿಬಿ ವಿರುದ್ಧ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ಹೆಸರೇ ಗೊತ್ತಿಲ್ಲದ ಆಟಗಾರನ ಖರೀದಿ ಮಾಡಲು ಬೇಕಾದಷ್ಟು ಹಣ ಇದೆ. ಆದರೆ, ಕನ್ನಡಿಗರನ್ನು ಖರೀದಿ ಮಾಡಲು ನಿಮ್ಮ ಬಳಿ ಹಣ ಇಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ. ಬಿಡ್ ಮಾಡುವಾಗ ಆರ್ಸಿಬಿ ಬಗ್ಗೆ ಈ ಬಾರಿ ಬಹಳಷ್ಟು ನಿರೀಕ್ಷೆ ಇತ್ತು. ಆದರೆ ಈಗ ಆ ನಿರೀಕ್ಷೆ ಎಲ್ಲವೂ ಸುಳ್ಳಾಗಿದೆ. ಬಿಡ್ ಮಾಡಿ ಖರೀದಿಸಿದ ಆಟಗಾರರ ಬಗ್ಗೆ ಫ್ಯಾನ್ಸ್ ಗೆ ಸಮಾಧಾನವಿಲ್ಲದಂತಾಗಿದೆ.