ರಾಮನಗರ: ಕೊರೊನಾ ಹೆಚ್ಚಳವಾಗುತ್ತಿರುವ ಹಿನ್ನೆಲೆ ಕಾಂಗ್ರೆಸ್ ನಾಯಕರ ಪಾದಯಾತ್ರೆ ಮೊಟಕುಗೊಂಡಿದೆ. 11 ದಿನಗಳ ಕಾಲ ಪಾದಯಾತ್ರೆ ಮಾಡಲು ನಿರ್ಧರಿಸಿ, ಜನವರಿ 9 ರಂದು ಚಾಲನೆ ನೀಡಿದ್ದರು. ಆದ್ರೆ ಇದೀಗ 5ನೇ ದಿನಕ್ಕೆ ಪಾದಯಾತ್ರೆ ಸ್ಥಗಿತಗೊಂಡಿದೆ. 5 ದಿನದಲ್ಲಿ 60 ಕಿ.ಮೀ ನಡರದಿದ್ದರು. ಸಂಗಮದಿಂದ ಹೊರಟಿದ್ದ ಪಾದಯಾತ್ರೆ ರಾಮನಗರಕ್ಕೆ ತಲುಪಿತ್ತು. ಸಮಾರೋಪ ಸಮಾರಂಭ ಬೆಂಗಳೂರಿನಲ್ಲಿ ನಡೆಯಬೇಕಿತ್ತು. ಆದರೆ ಹೈಕೋರ್ಟ್ ಕ್ಲಾಸ್ ತೆಗೆದುಕೊಂಡಿದ್ದಕ್ಕಾಗಿ ಬಿಬಿಎಂಪಿ ಅದಕ್ಕೆ ಅನುಮತಿ ನಿರಾಕರಿಸಿತ್ತು.
ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಹಲವರಿಗೆ ಕೊರೊನಾ ಪಾಸಿಟಿವ್ ಆಗಿತ್ತು. ಜೊತೆಗೆ ಕೊರೊನಾದಂತ ಸಮಯದಲ್ಲಿ ಪಾದಯಾತ್ರೆಗೆ ಅವಕಾಶ ಕೊಟ್ಟಿದ್ದಕ್ಕೆ ಹೈಕೋರ್ಟ್ ಕೂಡ ತರಾಟೆಗೆ ತೆಗೆದುಕೊಂಡಿತ್ತು. ಹೀಗಾಗಿ ಹೈಕಮಾಂಡ್ ಕೂಡ ಕಾಂಗ್ರೆಸ್ ನಾಯಕರಿಗೆ ಪರಿಸ್ಥಿತಿ ನೋಡಿ ಮುಂದುವರೆಯುವಂತೆ ಸೂಚನೆ ನೀಡಿತ್ತು.
ಇದೀಗ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಎಲ್ಲಾ ನಾಯಕರೊಂದಿಗೆ ಸಭೆ ನಡೆಸಿ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಸಭೆಯ ಬಳಿಕ ಆರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪಾದಯಾತ್ರೆ ನಿಲ್ಲಿಸೋದು ಬೇಡ. ಬಿಡದಿವರೆಗೂ ನಡೆಯೋಣ ಎಂದಿದ್ದರು. ಆದ್ರೆ ಸಿದ್ದರಾಮಯ್ಯ ಹೇಳಿಕೆಗೆ ಎಲ್ಲಾ ನಾಯಕರು ಓಕೆ ಎಂದಿದ್ದಾರೆ.
ಕೋರ್ಟ್ ಆದೇಶ ಪಾಲಿಸೋಣ ಎಂದು ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ. ಪ್ರತಿಷ್ಟೆ ಬಿಟ್ಟು ಜನಾಭಿಪ್ರಾಯ ಕೇಳೋಣಾ. ಕೊರೊನಾ ಹೆಚ್ಚಳ ನಮ್ಮ ಮೇಲೆಯೇ ಬರಲಿದೆ. ಆ ಅಪವಾದ ಹೊತ್ತುಕೊಳ್ಳುವುದು ಬೇಡ. ಪಾದಯಾತ್ರೆ ಸದ್ಯಕ್ಕೆ ಕೈ ಬಿಡೋಣಾ, ಕೊರೊನಾ ಕಡಿಮೆಯಾದ ಬಳಿಕ ಮತ್ತೆ ಇದೇ ಜಾಗದಿಂದ ಪಾದಯಾತ್ರೆ ಆರಂಭಿಸೋಣ ಎಂದು ಸಲಹೆ ನೀಡಿದ್ದಾರೆ.