ಬೆಂಗಳೂರು: ಶಾಲಾ-ಕಾಲೇಜುಗಳಲ್ಲಿ ಬೋರ್ಡ್ ಪರೀಕ್ಷೆ ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಿಂದ ಮಹತ್ವದ ಆದೇಶ ಸಿಕ್ಕಿದೆ. 5, 8, 9, 11 ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ನಡೆಸುವ ವಿಚಾರಕ್ಕೆ ಏಕಸದಸ್ಯ ಪೀಠದ ಆದೇಶಕ್ಕೆ ಮಧ್ಯಂತರ ತಡೆ ನೀಡಿದ ಹೈಕೋರ್ಟ್, ಪರೀಕ್ಷೆ ನಡೆಸುವುದಕ್ಕೆ ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿದೆ. ಈ ಹಿಂದೆಯೇ ರಾಜ್ಯ ಪಠ್ಯಕ್ರಮವಿರೋ ಶಾಲೆಗಳ 5,8,9 ಮತ್ತು 11ನೇ ತರಗತಿ ಮಕ್ಕಳಿಗೆ ಸ್ಟೇಟ್ ಲೆವೆಲ್ ಬೋರ್ಡ್ ಎಕ್ಸಾಮ್ಸ್ ನಡೆಸುವ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿದ್ದ ಸುತ್ತೋಲೆಯನ್ನು ಹೈಕೋರ್ಟ್ ರದ್ದು ಮಾಡಿತ್ತು.
ಹೈಕೋರ್ಟ್ ಸೋಮಶೇಖರ್ ನೇತೃತ್ವದ ವಿಭಾಗೀಯ ಪೀಠ, ಏಕಸದಸ್ಯ ಪೀಠದ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಇದರಿಂದ ಸೋಮವಾರದಿಂದ ಆರಂಭ ಆಗುವ ಬೋರ್ಡ್ ಪರೀಕ್ಷೆ ನಡೆಯಲಿದೆ. ವಿಚಾರಣೆ ವೇಳೆ ಸರಕಾರದ ಪರ ವಕೀಲರು ವಾದ ಮಂಡಿಸಿ, ಸೋಮವಾರದಿಂದ ಬೋರ್ಡ್ ಪರೀಕ್ಷೆ ನಡೆಸಲು ಎಲ್ಲಾ ಸಿದ್ಧತೆ ನಡೆಸಲಾಗಿದೆ. ಈ ಹಂತದಲ್ಲಿ ಸರಕಾರ ಬೋರ್ಡ್ ಪರೀಕ್ಷೆ ನಡೆಸಲು ತೀರ್ಮಾನಿಸಿ ಹೊರಡಿಸಿದ್ದ ಆದೇಶವನ್ನು ಏಕ ಸದಸ್ಯ ಪೀಠ ರದ್ದುಗೊಳಿಸಿದೆ.
ಇದಕ್ಕೆ ಖಾಸಗಿ ಶಾಲೆಗಳ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪರೀಕ್ಷೆ ನಡೆಸುವ ವಿಚಾರದಲ್ಲಿ ಕರ್ನಾಟಕದ ಶಿಕ್ಷಣ ಕಾಯ್ದೆಯಲ್ಲಿ ಹೇಳಿರುವ ನಿಯಮಗಳನ್ನು ಪರಿಶೀಲನೆ ನಡೆಸಿದ ಬಳಿಕವೇ ಸರ್ಕಾರದ ಸುತ್ತೋಲೆಯನ್ನು ಏಕಸದಸ್ಯ ಪೀಠ ರದ್ದು ಪಡಿಸಿದೆ. ಕಳೆದ ವರ್ಷವೂ ವಿಭಾಗೀಯ ಪೀಠದಿಂದ ಆದೇಶ ಪಡೆದು ಸರ್ಕಾರ ಬೋರ್ಡ್ ಪರೀಕ್ಷೆ ನಡೆಸಿತ್ತು. ಬೋರ್ಡ್ ಪರೀಕ್ಷೆ ನಡೆಸಲು ಅಗತ್ಯ ನಿಯಮ ರೂಪಿಸಬೇಕಿದೆ ಎಂದು ವಾದ ಮಂಡಿಸಿದೆ.