ಚಿತ್ರದುರ್ಗ, (ಫೆ.01) : ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಬುಧವಾರ ಮಂಡಿಸಿದ ಕೇಂದ್ರ ವಿತ್ತೀಯ ಬಜೆಟ್‌ನಲ್ಲಿ ಮಧ್ಯ ಕರ್ನಾಟಕದ ಬಯಲುಸೀಮೆ ಪ್ರದೇಶಗಳಿಗೆ ನೀರುಣಿಸುವ ಮಹತ್ವದ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ. ಅನುದಾನದ ನೆರವು ಘೋಷಿಸಿರುವುದನ್ನು ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಸ್ವಾಗತಿಸುತ್ತದೆ.
ನೀರಾವರಿ ಆಶಯವೊಂದು ಮೊದಲ ರಾಷ್ಟ್ರೀಯ ಯೋಜನೆಯಾಗಿ ಘೋಷಿತವಾಗುವ ವೇಳೆ ಅಲ್ಪಮಟ್ಟದ ಅನುದಾನ ನೆರವು ಘೋಷಿಸಿದ ಕ್ರಮಕ್ಕೆ ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ. ಈ ಹಿಂದೆ ಬಸವರಾಜ ಬೊಮ್ಮಾಯಿ ಅವರು ಜಲಸಂಪನ್ಮೂಲ ಸಚಿವರಾಗಿದ್ದಾಗ ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆ ಬಗ್ಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಈ ವೇಳೆ ಕೇಂದ್ರದ ಪಾಲು ಶೇ 90 ರಷ್ಟು ಎಂದು ನಿರೀಕ್ಷಿಸಲಾಗಿತ್ತು.
ಯೋಜನೆಗೆ ಕೇಂದ್ರದ ನೆರವು ದೊರೆತಲ್ಲಿ ಕಾಮಗಾರಿಗಳು ಬೇಗನೆ ಪೂರ್ಣಗೊಂಡು ಬಯಲುಸೀಮೆ ರೈತಾಪಿ ವರ್ಗದ ಹಸಿರು ಕನಸುಗಳು ಬೇಗನೆ ಸಾಕಾರಗೊಳ್ಳುತ್ತವೆ ಎಂದು ಭಾವಿಸಲಾಗಿತ್ತು. ಕೇಂದ್ರ ಸರ್ಕಾರ ಈಗ ಬಜೆಟ್‌ನಲ್ಲಿ ಅನುದಾನ ಘೋಷಣೆ ಮಾಡಿರುವುದನ್ನು ಗಮನಿಸಿದರೆ ಯಾವ ರೀತಿಯ ಮಾನದಂಡಗಳನ್ನು ಅನುಸರಿಸಲಾಗಿದೆ ಎಂಬ ಬಗ್ಗೆ ಅನುಮಾನಗಳು ಮೂಡುತ್ತಿವೆ.
ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಅನುದಾನ ಅಲ್ಪಮಟ್ಟದ್ದಾಗಿದ್ದು, ಭದ್ರಾ ಮೇಲ್ದಂಡೆ ಅಪಾರ ಪ್ರಮಾಣದಲ್ಲಿ ಅನುದಾನ ನಿರೀಕ್ಷಿಸಿದೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ತೀರಾ ಬಿಗಿಹಿಡಿತ ಸಾಧಿಸುವುದು ತರವಲ್ಲ. ಭದ್ರಾ ಮೇಲ್ದಂಡೆಯನ್ನು 21 ಸಾವಿರ ಕೋಟಿ ರೂಪಾಯಿಯನ್ನು ಪರಿಷ್ಕೃತಗೊಳಿಸಲಾಗಿದೆ.
ಯೋಜನೆ ಒಟ್ಟಾರೆ ವೆಚ್ಚದ ಶೇ.90 ರಷ್ಟನ್ನಾದರೂ ನೀಡಿ ರಾಷ್ಟ್ರೀಯ ಯೋಜನೆ ಘೋಷಣೆಗೆ ಗಂಭೀರ ಸ್ಪರ್ಶ ನೀಡಬಹುದಿತ್ತು. ಭದ್ರಾ ಮೇಲ್ದಂಡೆಯ ರಾಷ್ಟ್ರೀಯ ಯೋಜನೆಯಾಗಿ ಘೋಷಿಸಲು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರು ಈ ತಿಂಗಳ ಎರಡನೇ ವಾರದಲ್ಲಿ ಚಿತ್ರದುರ್ಗ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಈ ವೇಳೆ ಅವರು ತಮ್ಮದೇ ನಿಲುವನ್ನು ಬದಲಿಸಿ, ಇನ್ನೂ ಹೆಚ್ಚಿನ ಅನುದಾನ ನೀಡುವ ಮೂಲಕ ತಮ್ಮದೇ ಆದ ರಾಜ್ಯ ಸರ್ಕಾರಕ್ಕೆ ಆರ್ಥಿಕ ಚೈತನ್ಯ ನೀಡಬೇಕು.
ಯೋಜನೆ ಶೀಘ್ರ ಪೂರ್ಣಗೊಳ್ಳಲು ಕಾಳಜಿ ಪ್ರದರ್ಶಿಸಬೇಕೆಂದು ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಅಧ್ಯಕ್ಷ ಟಿ. ನುಲೇನೂರು ಎಂ. ಶಂಕರಪ್ಪ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಕೆ.ಆರ್. ದಯಾನಂದ ಒತ್ತಾಯಿಸಿದ್ದಾರೆ.
ಕೇಂದ್ರದಿಂದ ಅನುದಾನ ಘೋಷಣೆ ಮಾಡುವಲ್ಲಿ ಶ್ರಮವಹಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹಾಗೂ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಅವರನ್ನು ಸಮಿತಿ ಅಭಿನಂದನೆ ಸಲ್ಲಿಸುತ್ತದೆ.