ಬೆಂಗಳೂರು: ನಗರದಲ್ಲಿ ಐಟಿ ಅಧಿಕಾರಿಗಳ ದಾಳಿ ಮಾಡಿದ್ದು, ಮಾಜಿ ಕಾರ್ಪೋರೇಟರ್ ನಿವಾಸದಲ್ಲಿ 42 ಕೋಟಿ ಹಣ ಸಿಕ್ಕಿದೆ. ಈ ಹಣ ನೋಡಿ ಐಟಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಬಿಲ್ಡರ್, ಕಾಂಟ್ರಾಕ್ಟರ್ ಅಂಬಿಕಾಪತಿ ಹಾಗೂ ಇವರ ಪತ್ನಿ, ಮಾಜಿ ಕಾರ್ಪೊರೇಟರ್ ಅಶ್ವತ್ಥಮ್ಮ ಮನೆಯ ಮೇಲೆ ದಾಳಿ ಮಾಡಲಾಗಿದೆ.
ಇವರಿಗೆ ಸಂಬಂಧಿಸಿದ ಕಡೆಗಳಲ್ಲಿ ದಾಳಿ ನಡೆಸಲಾಗಿದೆ. ಸೋದರ ಪ್ರದೀಪ್ ಮನೆಯ ಮೇಲೂ ದಾಳಿ ನಡೆಸಿದ್ದು, ಮಂಚದ ಕೆಳಗೆ ಕೋಟಿ ಕೋಟಿ ಹಣ ಸಿಕ್ಕಿದೆ. ಅದು ಒಂದಲ್ಲ ಎರಡಲ್ಲ, ಬರೋಬ್ಬರಿ 42 ಕೋಟಿ ಹಣ ಮಂಚದ ಕೆಳಗೆ ಇತ್ತು. ಆರ್ ಟಿ ನಗರದ ಆತ್ಮಾನಂದ ಕಾಲೋನಿಯಲ್ಲಿರುವ ಫ್ಲ್ಯಾಟ್ ಮೇಲೆ ಈ ದಾಳಿ ನಡೆಸಲಾಗಿದೆ. ಈ ವೇಳೆ ಪ್ರದೀಪ್ ಮನೆಯ ಮಂಚದ ಕೆಳಗೆ ಬಾಕ್ಸ್ ಗಳಲ್ಲಿ ಹಣ ಇಡಲಾಗಿತ್ತು. 23 ಬಾಕ್ಸ್ ಗಳಲ್ಲಿ 500 ರೂಪಾಯಿ ನೋಟುಗಳ, 42 ಕೋಟಿ ಹಣವನ್ನು ಬಚ್ಚಿಡಲಾಗಿತ್ತು.
ಈ ಫ್ಲ್ಯಾಟ್ ಅಂಬಿಕಾಪತಿಗೆ ಸೇರಿದ್ದು ಎಂಬ ಮಾಹಿತಿ ಇದೆ. ಈಗಾಗಲೇ ಅಂಬಿಕಾಪತಿಗೆ ಸಂಬಂಧಿಸಿದ ವಿವಿಧ ಜಾಗಗಳಲ್ಲಿ, ಕೆಲಸ ಮಾಡುವ ಜಾಗ, ಆಫೀಸ್ ಜಾಗಗಳಲ್ಲಿ ದಾಳಿ ನಡೆಸಲಾಗಿದೆ. ಬ್ಯಾಂಕ್ ಅಕೌಂಟ್ ಗಳ ಬಗ್ಗೆಯೂ ಪರಿಶೀಲನೆ ನಡೆಸಲಿದ್ದಾರೆ. ಮಾಹಿತಿ ಪ್ರಕಾರ ಇಪ್ಪತ್ತಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ. ಅದರಲ್ಲಿ ಇನ್ನೆಷ್ಟು ಕೋಟಿ ಹಣ ಇರುತ್ತೋ ಏನೋ..? ಹೀಗಾಗಿ ಎಲ್ಲಾ ಕಡೆಯಲ್ಲೂ ಪರಿಶೀಲನೆ ನಡೆಸುತ್ತಿದ್ದಾರೆ.
ಈ ದಂಪತಿ ಮೊದಲು ಕಾವಲ್ ಭೈರಸಂದ್ರದಲ್ಲಿ ವಾಸವಿತ್ತು. ಬಳಿಕ ಆ ಮನೆಯನ್ನು ಬಾಡಿಗೆ ನೀಡಿ, ಮಾನ್ಯತಾ ಟೆಕ್ ಪಾರ್ಕ್ ಕಡೆ ಹೋಗಿದ್ದಾರೆ. ಇತ್ತಿಚೆಗೆ ಬಾಡಿಗೆ ನೀಡಿದ್ದ ಮನೆಯನ್ನು ಖಾಲಿ ಮಾಡಿಸಿ, ಆಗಾಗ ಅಂಬಿಕಾಪತಿ ಬಂದು ಹೋಗುತ್ತಿದ್ದರಂತೆ. ಎಲ್ಲಾ ವ್ಯವಹಾರಗಳು ಇಲ್ಲಿಯೇ ನಡೆದಿರಬಹುದು ಎಂಬ ಅನುಮಾನವೂ ಇದೆ. ಹೀಗಾಗಿ ಎಲ್ಲಾ ರೀತಿಯಿಂದಾನೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.