ಬೆಂಗಳೂರು: ಗುತ್ತಿಗೆದಾರರಿಂದ 40% ಕಮಿಷನ್ ತೆಗೆದುಕೊಳ್ಳುತ್ತಿರುವುದರ ಬಗ್ಗೆ ಗುತ್ತಿಗೆದಾರರು ರೊಚ್ಚಿಗೆದ್ದಿದ್ದಾರೆ. ಕಮಿಷನ್ ತೆಗೆದುಕೊಳ್ಳುವುದು ನಿಲ್ಲದೆ ಹೋದರೆ ಜನವರಿ 3 ರಂದು ಗುತ್ತಿಗೆದಾರರು ಉಗ್ರ ಹೋರಾಟ ಮಾಡುತ್ತೇವೆಂದು ಎಚ್ಚರಿಕೆ ನೀಡಿದ್ದಾರೆ.
ಸದ್ಯ ನೀರಾವರಿ ಯೋಜನೆಯ ಮುಖ್ಯಸ್ಥ ರಾಕೇಶ್ ಸಿಂಗ್ ನೇತೃತ್ವದಲ್ಲಿ ಸರ್ಕಾರ ತನಿಖೆಗೆ ಒತ್ತಾಯಿಸಿದೆ. ಆದ್ರೆ ಅವರ ನೇತೃತ್ವದಲ್ಲಿ ತನಿಖೆ ಬೇಡ. ಯಾಕಂದ್ರೆ ನೀರಾವರಿ ಯೋಜನೆಯಲ್ಲೂ ಕಮಿಷನ್ ಭ್ರಷ್ಟಾಚಾರ ನಡೆಯುತ್ತಿದೆ. ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರ ಸಮ್ಮುಖದಲ್ಲಿ ತನಿಖೆಗೆ ವಹಿಸಬೇಕು. ಆಗ ನಮ್ಮ ಬಳಿ ಇರುವ ದಾಖಲೆಗಳನ್ನು ನೀಡುತ್ತೇವೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ ಕೆಂಪಣ್ಣ ಹೇಳಿದ್ದಾರೆ.
ಈ ಸಂಬಂಧ ನಾವೂ ಈಗಾಗಲೇ ಸಿಎಂ ಸ್ಥಾನದಲ್ಲಿದ್ದ ಯಡಿಯೂರಪ್ಪ ಅವರನ್ನ ಭೇಟಿ ಮಾಡಲು ಯತ್ನಿಸಿದ್ದೆವು. ಆದ್ರೆ ಅವರು ಭೇಟಿಗೆ ಅವಕಾಶ ನೀಡಲಿಲ್ಲ. ಪ್ರಧಾನಿ ಮತ್ತು ರಾಜ್ಯಪಾಲರಿಗೂ ಮನವಿ ಪತ್ರ ಬರೆದಿದ್ದೆವು, ಆದ್ರೆ ಅವರಿಂದಲೂ ಸ್ಪಂದನೆ ಸಿಕ್ಕಿಲ್ಲ. ಈಗ ಸಿಎಂ ಬೊಮ್ಮಾಯಿ ಅವರಿಗೂ ಪತ್ರ ಬರೆದಿದ್ದೇವೆ ಅವರು ಭೇಟಿಗೆ ಅವಕಾಶ ನೀಡಿಲ್ಲ. ಲೋಕೋಪಯೋಗಿ ಇಲಾಖೆ ಹಿರಿಯ ಅಧಿಕಾರಿಗಳ ಭೇಟಿ ಮಾಡಿ ಗುತ್ತಿಗೆಗಳಲ್ಲಿ 40%ಕ್ಕಿಂತ ಹೆಚ್ಚು ಭ್ರಷ್ಟಾಚಾರ ನಡೀತಿದೆ. ನಮ್ಮ ಬಳಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳೂ ಇವೆ. ಸೂಕ್ತ ತನಿಖೆಗೆ ವಹಿಸಿದರೆ ನಮ್ಮ ಬಳಿ ಇರುವ ದಾಖಲೆ ಕೊಡುತ್ತೇವೆ ಎಂದು ತಿಳಿಸಿದ್ದೇವೆ ಎಂದಿದ್ದಾರೆ.