ಚಿತ್ರದುರ್ಗ ಜಿಲ್ಲೆಯಲ್ಲಿ 4 ಖರೀದಿ ಕೇಂದ್ರ ಆರಂಭ : ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ

2 Min Read

ವರದಿ ಕೃಪೆ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ,(ಡಿ.16) : 2022-23ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 4 ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ.

ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ನೇರವಾಗಿ ಉತ್ತಮ ಗುಣಮಟ್ಟದ ರಾಗಿಯನ್ನು ಪ್ರತಿ ಕ್ವಿಂಟಾಲ್‍ಗೆ ರೂ.3578/-ರಂತೆ ಚಿತ್ರದುರ್ಗ, ಹೊಳಲ್ಕೆರೆ ಮತ್ತು ಹೊಸದುರ್ಗ ಎಪಿಎಂಸಿ ಆವರಣದಲ್ಲಿ ಖರೀದಿಸಲಾಗುವುದು.

ಚಿತ್ರದುರ್ಗ ನಗರದ ಎಪಿಎಂಸಿ ಪ್ರಾಂಗಣ, ಹೊಳಲ್ಕೆರೆ ತಾಲ್ಲೂಕಿನ ಚಿಕ್ಕಜಾಜೂರು ಎಪಿಎಂಸಿ ಪ್ರಾಂಗಣದಲ್ಲಿ ರೈತ ನೋಂದಣಿ ಮತ್ತು ಖರೀದಿ ಕೇಂದ್ರ ಹಾಗೂ ಹೊಸದುರ್ಗ ಪಟ್ಟಣದ ಎಪಿಎಂಸಿ ಪ್ರಾಂಗಣ-1ರಲ್ಲಿ ರೈತ ನೋಂದಣಿ ಕೇಂದ್ರ ಹಾಗೂ ಹೊಸದುರ್ಗ ಎಪಿಎಂಸಿ ಪ್ರಾಂಗಣ ಖರೀದಿ ಕೇಂದ್ರ-1ರಲ್ಲಿ ಖರೀದಿ ಕೇಂದ್ರ ಹಾಗೂ ಹೊಸದುರ್ಗ ತಾಲ್ಲೂಕಿನ ಶ್ರೀರಾಂಪುರ ಎಪಿಎಂಸಿ ಪ್ರಾಂಗಣದಲ್ಲಿ ನೋಂದಣಿ ಕೇಂದ್ರ ಹಾಗೂ ಹೊಸದುರ್ಗ ಎಪಿಎಂಸಿ ಪ್ರಾಂಗಣ ಖರೀದಿ ಕೇಂದ್ರ-2ರಲ್ಲಿ ಖರೀದಿ ಕೇಂದ್ರ ತೆರೆಯಲಾಗಿದೆ.

ಸಣ್ಣ ಮತ್ತು ಅತೀ ಸಣ್ಣ ರೈತರಿಂದ 1 ಎಕರೆಗೆ 10 ಕ್ವಿಂಟಾಲ್‍ನಂತೆ ಗರಿಷ್ಟ 20 ಕ್ವಿಂಟಾಲ್ ರಾಗಿ ಖರೀದಿಸಲಾಗುವುದು. ನೋಂದಣಿ ಕಾರ್ಯಕ್ರಮವು ಡಿಸೆಂಬರ್ 15 ರಿಂದ ಪ್ರಾರಂಭಗೊಂಡಿದ್ದು, ರೈತರು ನೋಂದಣಿ ಮಾಡಿಸಲು ಕೃಷಿ ಇಲಾಖೆಯಿಂದ ನೀಡಿರುವ ಫ್ರೂಟ್ಸ್ ಐಡಿ ಕಡ್ಡಾಯವಾಗಿರುತ್ತದೆ. 2023ರ ಜನವರಿ 1 ರಿಂದ ರಾಗಿ ಖರೀದಿಸುವ ಪ್ರಕ್ರಿಯೆ ಪ್ರಾರಂಭಗೊಂಡು 2023ರ ಮಾರ್ಚ್ 31ಕ್ಕೆ ಮುಕ್ತಾಯಗೊಳಿಸಲಾಗುವುದು.
ರೈತರು ನೋಂದಣಿ ಮಾಡಿಸಲು ಫ್ರೂಟ್ಸ್ ಗುರುತಿನ ಸಂಖ್ಯೆಯೊಂದಿಗೆ ಖರೀದಿ ಕೇಂದ್ರಕ್ಕೆ ಬಮದು ತಮ್ಮ ಹೆಸರನ್ನು ದಾಖಲೆ ಮಾಡಿಸಿಕೊಳ್ಳಬೇಕು.

ಫ್ರೂಟ್ಸ್ ಐಡಿ ಇಲ್ಲದ ರೈತರ ಹೆಸರನ್ನು ನೋಂದಾಯಿಸಿಕೊಳ್ಳಲು ಅವಕಾಶ ಇರುವುದಿಲ್ಲ ಹಾಗೂ ರೈತರು ಬೇರಾವುದೇ ದಾಖಲೆಗಳನ್ನು ತರುವ ಅಗತ್ಯವಿಲ್ಲ. ಪೂರ್ಣ ಒಣಗಿದ ಹಾಗೂ ಸ್ವಚ್ಛಗೊಳಿಸಿದ ಉತ್ತಮ ಗುಣಮಟ್ಟದ ಮತ್ತು ಗ್ರೇಡರ್‍ಗಳಿಂದ ದೃಢೀಕರಿಸಿದ ಎಫ್‍ಎಕ್ಯೂ ಗುಣಮಟ್ಟದ ರಾಗಿಯನ್ನು ಮಾತ್ರ ಖರೀದಿಸಲಾಗುವುದು.

ಕಳಪೆ ಗುಣಮಟ್ಟದ ರಾಗಿ ತಿರಸ್ಕರಿಸಲಾಗುವುದು. ರೈತರು ದಾಸ್ತಾನನ್ನು ತಂದು ಸರ್ಕಾರವು ನಿಗಧಿಪಡಿಸಿರುವ ಚೀಲದಲ್ಲಿ ಜರಡಿ ಮಾಡಿಸಿದ ನಂತರ 50 ಕೆಜಿ ಸಾಮಾಥ್ರ್ಯದ ಗೋಣಿ ಚೀಲದಲ್ಲಿಯೇ ತುಂಬಿಸಿಕೊಡುವುದು.

ರೈತರು ತಮ್ಮ ಗುರುತಿನ ಸಂಖ್ಯೆಯೊಂದಿಗೆ ನೋಂದಾಯಿಸಿದ ನಂತರ ತಾವು ಬೆಳೆದ ರಾಗಿ ದಾಸ್ತಾನಿನ ಮಾದರಿಯೊಂದಿಗೆ ಖರೀದಿ ಕೇಂದ್ರಕ್ಕೆ ಬಂದು ಕೃಷಿ ಇಲಾಖೆಯಿಂದ ನೇಮಿಸಲ್ಪಟ್ಟಿರುವ ಗುಣಮಟ್ಟ ಪರಿವೀಕ್ಷಕರು ಹಾಗೂ ಮೂರನೇ ವ್ಯಕ್ತಿ ಗುಣಮಟ್ಟ ಪರೀಕ್ಷಕರಿಂದ ಉತ್ತಮವಾಗಿದೆ ಎಂದು ದೃಢೀಕರಿಸಿದ ನಂತರ ರಾಗಿಯನ್ನು ನಿಗಧಿತ ದಿನಾಂಕದಂದು ತಂದು ಮಾರಾಟ ಮಾಡಿ, ಖರೀದಿ ಅಧಿಕಾರಿಯಿಂದ ಕಡ್ಡಾಯವಾಗಿ ಗ್ರೈನ್ ವೋಚರ್ ಪಡೆಯುವುದು. ರೈತರಿಗೆ ರಾಗಿ ಮಾರಾಟದ ಮೊತ್ತವನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ನೇರವಾಗಿ ಬ್ಯಾಂಕ್ ಖಾತೆಗೆ ಪಾವತಿಸಲಾಗುವುದು.

ಎನ್‍ಪಿಸಿಐ ಮ್ಯಾಪಿಂಗ್‍ನ್ನು ಕಡ್ಡಾಯವಾಗಿ ಪ್ರತಿಯೊಬ್ಬ ರೈತರು ಬ್ಯಾಂಕಿಗೆ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್‍ಗೆ ಸೀಡಿಂಗ್ ಮಾಡಿಸುವುದು ಕಡ್ಡಾಯವಾಗಿರುತ್ತದೆ. ತದನಂತರವೇ ಖಾತೆಗೆ ಹಣ ಸಂದಾಯವಾಗುವುದು. ಫ್ರೂಟ್ಸ್ ದತ್ತಾಂಶದಲ್ಲಿ ರಾಗಿ ಎಂದು ನಿಖರವಾಗಿ ನಮೂದಾಗಿದ್ದರೆ ಮಾತ್ರ ರಾಗಿಯನ್ನು ಖರೀದಿ ಮಾಡಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *