ಹಾಸನ: ಒಬ್ಬ ಐಪಿಎಸ್ ಆಫೀಸರ್ ಬದುಕು ಶುರುವಾಗುವ ಮುನ್ನವೇ ಅಂತ್ಯವಾಗಿದ್ದು ಮಾತ್ರ ದುರದೃಷ್ಟಕರ. ಹಾಸನ ತಾಲೂಕಿನ ಕಿತ್ತಾನೆಗಡಿ ಗ್ರಾಮದ ಬಳಿ ಆದ ಅಪಘಾತದಿಂದ ಯುವ ಐಪಿಎಸ್ ಆಫೀಸರ್ ಹರ್ಷ ವರ್ಧನ್ ಬಲಿಯಾಗಿದ್ದಾರೆ. ಇಂದು ಅಧಿಕಾರ ಸ್ವೀಕರಿಸಲು ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಹರ್ಷಬರ್ಧನ್ ಅವರಿಗೆ ಈಗಿನ್ನು 26 ವರ್ಷ. ಇವರು ಮೂಲತಃ ಬಿಹಾರದವರಾಗಿದ್ದು, ಮಧ್ಯಪ್ರದೇಶದಲ್ಲಿ ವಾಸವಾಗಿದ್ದರು.
2023-24ರ ಐಪಿಎಸ್ ಬ್ಯಾಚ್ ನಲ್ಲಿ ಉತ್ತೀರ್ಣರಾಗಿದ್ದರು. ಕರ್ನಾಟಕ ಕೇಡರ್ ನಲ್ಲಿ ಆಯ್ಕೆಯಾಗಿದ್ದರು. ಮೈಸೂರು ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪಡೆದು, ಹಾಸನ ಜಿಲ್ಲಾ ಎಸ್ಪಿ ಕಚೇರಿಯಲ್ಲಿ ಕೆಲಸಕ್ಕೆ ವರದಿ ಮಾಡಿಕೊಳ್ಳಲು ಜೀಪಿನಲ್ಲಿ ಬರುತ್ತಿದ್ದಾಗ ಅಪಘಾತವಾಗಿದೆ. ಇವರ ಸಾವಿಗೆ ಸಿಎಂ ಸಿದ್ದರಾಮಯ್ಯ ಕೂಡ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
ಹಾಸನ – ಮೈಸೂರು ಹೆದ್ದಾರಿಯ ಕಿತ್ತಾನೆ ಗಡಿ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಹರ್ಷಬರ್ಧನ್ ಅವರು ನಿಧನರಾದ ವಿಷಯ ತಿಳಿದು ದುಃಖವಾಯಿತು. ಐಪಿಎಸ್ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಲು ತೆರಳುತ್ತಿದ್ದ ವೇಳೆ ಇಂಥದ್ದೊಂದು ದುರ್ಘಟನೆ ಜರುಗಿದೆ ಎನ್ನುವುದು ಬಹಳಾ ಬೇಸರದ ಸಂಗತಿ. ವರ್ಷಗಳ ಕಠಿಣ ಪರಿಶ್ರಮ ಫಲ ನೀಡುವ ಹೊತ್ತಲ್ಲಿ ಹೀಗಾಗಬಾರದಿತ್ತು. ಹರ್ಷಬರ್ಧನ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಮೃತನ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಹರ್ಷಬರ್ಧನ್ ಅವರಿಗೆ ಚಿಕಿತ್ಸೆ ನೀಡಿದ ವೈದ್ಯರು ಕೊಟ್ಟ ಮಾಹಿತಿ ಪ್ರಕಾರ, ಹರ್ಷಬರ್ಧನ್ ಅವರ ತಲೆಗೆ ತೀವ್ರ ಪೆಟ್ಟಾಗಿತ್ತು. ತಕ್ಷಣವೇ ಅವರಿಗೆ ಸಿಟಿ ಸ್ಕ್ಯಾನ್ ಎಲ್ಲಾ ಮಾಡಿದ್ವಿ. ಎಲ್ಲಾ ರೀತಿಯ ಚಿಕಿತ್ಸೆಯನ್ನು ಮಾಡುವುದಕ್ಕೆ ಟ್ರೈ ಮಾಡಿದೆವು. ಹಾರ್ಟ್ ಕೂಡ ಕೆಲಸ ಮಾಡಲಿಲ್ಲ. ನಾಲ್ಕು ಗಂಟೆಗಳ ಚಿಕಿತ್ಸೆ ಫಲಕೊಡಲಿಲ್ಲ ಎಂದು ತಿಳಿಸಿದ್ದಾರೆ.