ಮಧ್ಯರಾತ್ರಿ ಕಾಣಿಸಿಕೊಂಡ ಬೆಂಕಿ ಎಲ್ಲೆಡೆ ರಾಚಿ, ಸುಮಾರು 35 ಮಂದಿ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ. ಬೆಂಕಿಯ ಪ್ರಕರಣದಿಂದಾಗಿ 450ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುಗಳ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ. ಆದರೆ ಬೆಂಕಿ ಅವಘಡಕ್ಕೆ ಕಾರಣ ಏನೆಂಬುದು ಇನ್ನು ತಿಳಿದು ಬಂದಿಲ್ಲ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬಂದಿದ್ದು, ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಆದರೆ ಬೆಂಕಿ ನಂದಿಸುವಾಗ ಸಿಬ್ಬಂದಿಗೂ ಸಣ್ಣ ಪುಟ್ಟ ಗಾಯಗಳಾಗಿವೆ ಎನ್ನಲಾಗಿದೆ.
ದೇಶದ ಪ್ರಮುಖ ಬಂದರಾದ ಚಿತ್ತಗಾಂಗ್ ನ ಹೊರಗೆ 40 ಕಿ.ಮೀಟರ್ ದೂರದಲ್ಲಿರುವ ದೇಶಿಯ ಕಂಟೇನರ್ ಸಂಗ್ರಹಣಾ ಘಟಕದಲ್ಲಿ ಈ ಘಟನೆ ನಡೆದಿದೆ. ಇದರಿಂದಾಗಿ ಸಾಕಷ್ಟು ಸಾವು ನೋವಾಗಿದ್ದು, 20 ಮಂದಿಯ ಸ್ಥಿತಿ ಗಂಭೀರವಾಗಿದೆ. ಶೇಕಡ 60-90 ರಷ್ಟು ಸುಟ್ಟ ಗಾಯದಿಂದ ಬಳಲುತ್ತಿದ್ದಾರೆ.
ಬೆಂಕಿ ಹೊತ್ತಿಕೊಂಡ ಗೋದಾಮಿನಲ್ಲಿದ್ದ ಕೆಲವು ಕಂಟೈನರ್ ಗಳಲ್ಲಿ ರಾಸಾಯನಿಕಗಳಿದ್ದವು. ಈ ಕಾರಣದಿಂದಾಗಿಯೇ ಬೆಂಕಿ ಕಾಣಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಅಲ್ಲಿನ ಸಬ್ ಇನ್ಸ್ಪೆಕ್ಟರ್ ತಿಳಿಸಿದ್ದಾರೆ.