ಬೆಂಗಳೂರು: ಚುನಾವಣೆ ಹತ್ತಿರವಾವುತ್ತಿದ್ದಂತೆ ರಾಜಕೀಯ ಪಕ್ಷಗಳು ಜನರಿಗೆ ಆಸೆ ಆಮಿಷಗಳನ್ನು ತೋರಿಸಲು ಸಿದ್ಧರಾಗಿ ಬಿಡುತ್ತಾರೆ. ಈಗಾಗಲೇ ಕೆಲವೊಂದು ಕಡೆ ಕುಕ್ಕರ್ ಗಿಫ್ಟ್, ಮಿಕ್ಸ್ ಗಿಫ್ಟ್ ಅನ್ನೋ ಸುದ್ದಿಯ ನಡುವೆ, ಪ್ರತಿಯೊಬ್ಬ ಮತದಾರನಿಗೆ ಆರು ಸಾವಿರ ನೀಡುತ್ತೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದರು.
ಆ ಮಾತನ್ನು ಆಧರಿಸಿ ಕಾಂಗ್ರೆಸ್ ಇಂದು ದೂರು ದಾಖಲಿಸಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ನೇತೃತ್ವದಲ್ಲಿ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಜೆಪಿ ನಡ್ಡಾ, ನಳೀನ್ ಕುಮಾರ್ ಕಟೀಲು, ಸಿಎಂ ಬೊಮ್ಮಾಯಿ ಮತ್ತು ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲಿಸಲಾಗಿದೆ. ಎಲ್ಲರ ವಿರುದ್ಧ ಎಫ್ಐಆರ್ ದಾಖಲು ಮಾಡಿ, ಬಂಧನ ಮಾಡಬೇಕೆಂದು ಕಾಂಗ್ರೆಸ್ ಒತ್ತಡ ಹೇರಿದೆ.
ದೂರು ದಾಖಲಿಸಿದ ಬಳಿಕ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿ ಸಂಚು ರೂಪಿಸುತ್ತಿದೆ. ಇದರಲ್ಲಿ ಜೆಪಿ ನಡ್ಡಾ, ಸಿಎಂ ಬೊಮ್ಮಾಯಿ, ರಮೇಶ್ ಜಾರಕಿಹೊಳಿ ಇದ್ದಾರೆ. ಈ ಸರ್ಕಾರ 40% ಸರ್ಕಾರ. ಬೆಂಗಳೂರಿನಲ್ಲಿ 50% ಹೊಡೆಯುತ್ತಿದೆ. ಯಾವ ಕಚೇರಿಯಲ್ಲೂ ಲಂಚ ಇಲ್ಲದೆ ಕೆಲಸವಾಗುವುದಿಲ್ಲ. ಈ ಚುನಾವಣೆಗೆ ಮೂವತ್ತು ಸಾವಿರ ಕೋಟಿ ಖರ್ಚು ಮಾಡಲು ಪ್ಲ್ಯಾನ್ ಮಾಡಿದೆ ಎಂದಿದ್ದಾರೆ.