ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗಾಗಿ ಶೇ.30ರಷ್ಟು ಹಾಸಿಗೆ ಮೀಸಲು: ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ

2 Min Read

ಚಿತ್ರದುರ್ಗ, (ಜನವರಿ.17) : ನಗರದ ತಮಟಕಲ್ಲು ರಸ್ತೆಯಲ್ಲಿರುವ ದೇವರಾಜ್ ಅರಸ್ ವಸತಿ ನಿಲಯದಲ್ಲಿ ಸೋಮವಾರ 250 ಬೆಡ್ ಸಾಮರ್ಥ್ಯವಿರುವ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಲಾಗಿದೆ.

ಕೋವಿಡ್ ಮೂರನೇ ಅಲೆ ನಿಯಂತ್ರಿಸಲು ಕೋವಿಡ್ ಪ್ರಕರಣಗಳ ಆರೈಕೆ, ಚಿಕಿತ್ಸೆಗಾಗಿ ಅನುಕೂಲವಾಗಲಿ ಹಾಗೂ ಮನೆ ಪ್ರತ್ಯೇಕತೆಗೆ ವ್ಯವಸ್ಥೆ ಇಲ್ಲದ ಪ್ರಕರಣಗಳು ಈ ಕೇಂದ್ರದ ಅನುಕೂಲ ಪಡೆಯಲಿ ಎಂಬ ಉದ್ದೇಶದಿಂದ ಕೋವಿಡ್ ಕೇರ್ ಸೆಂಟರ್ ಪ್ರಾರಂಭ ಮಾಡಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದರು.

ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗಾಗಿ ಶೇ.30ರಷ್ಟು ಹಾಸಿಗೆ ಮೀಸಲು: ಕೋವಿಡ್ ಮೂರನೇ ಅಲೆಯಲ್ಲಿ ಪಾಸಿಟಿವಿಟಿ ದರ ಹೆಚ್ಚಳವಾಗುತ್ತಿರುವುದರಿಂದ ಚಿಕಿತ್ಸೆಗಾಗಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ನೋಂದಾಯಿತ ಕೆಪಿಎಂಇ ಕಾಯ್ದೆಯಡಿ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿನ ಹಾಸಿಗೆಗಳ ಸಾಮಾಥ್ರ್ಯಕ್ಕೆ ಅನುಗುಣವಾಗಿ ಶೇ.30ರಷ್ಟು ಹಾಸಿಗೆಗಳನ್ನು ಮೀಸಲಿಡಬೇಕು. ಇವುಗಳನ್ನು ಸರ್ಕಾರಿ ಕೋಟಾದಡಿ ಹಂಚಿಕೆ ಮಾಡುವ ಬೆಡ್‍ಗಳಿಗೆ ಅನ್ವಯವಾಗಲಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದರು.

ಖಾಸಗಿ ಆಸ್ಪತ್ರೆಗಳು ಕಡ್ಡಾಯವಾಗಿ ಕರ್ತವ್ಯ ನಿರತ ವೈದ್ಯರು, ಸಿಬ್ಬಂದಿಗಳ ವಿವರ, ಚಿಕಿತ್ಸೆ ದರ ಮತ್ತು ಆಯಾ ಆಸ್ಪತ್ರೆಯ ನೋಡಲ್ ಅಧಿಕಾರಿಯ ವಿವರವನ್ನು ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶನ ಮಾಡುವುದು ಕಡ್ಡಾಯವಾಗಿರುತ್ತದೆ ಮತ್ತು ಆಯುಷ್ಮಾನ್ ಭಾರತ್ ಆರೋಗ್ಯ ವಿಮೆ ಯೋಜನೆಯಡಿ ಕೋವಿಡ್ ಚಿಕಿತ್ಸೆಗಾಗಿ ಅವಕಾಶ ಕಲ್ಪಿಸಲಾಗಿದ್ದು, ಇದನ್ನು ನೋಂದಾಯಿತ ಎಲ್ಲ ಆಸ್ಪತ್ರೆಗಳಿಗೆ ಅನ್ವಯಿಸಲಿದೆ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ರಂಗನಾಥ್ ಮಾತನಾಡಿ, ಪ್ರಾರಂಭಿಕ ಹಂತದಲ್ಲಿ ಎಲ್ಲ ತಾಲ್ಲೂಕಿನಲ್ಲಿ ಒಂದರಂತೆ ಕೋವಿಡ್ ಕೇರ್ ಸೆಂಟರ್ ಕಾರ್ಯನಿರ್ವಹಿಸುತ್ತಿವೆ. ಈಗಾಗಲೇ ಜಿಲ್ಲೆಯಾದ್ಯಂತ ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ವಿದ್ಯಾರ್ಥಿನಿಲಯಗಳನ್ನು ಗುರುತಿಸಲಾಗಿದೆ ಎಂದರು.
ಪ್ರಕರಣಗಳ ಆಧಾರದ ಮೇಲೆ ಇನ್ನೂ ಹೆಚ್ಚು ಕೋವಿಡ್ ಕೇರ್ ಸೆಂಟರ್‍ಗಳನ್ನು ತೆರೆಯಲಾಗುವುದು ಎಂದು ತಿಳಿಸಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ ಮಾತನಾಡಿ, ಈ ಕೇಂದ್ರದಲ್ಲಿ ಆಕ್ಸಿಜನ್ ನಿರ್ವಹಣ ವ್ಯವಸ್ಥೆಯ 20 ಹಾಸಿಗೆ ಮತ್ತು ಸಾಮಾನ್ಯ ಚಿಕಿತ್ಸೆಗಾಗಿ 230 ಹಾಸಿಗೆ ಒಟ್ಟು 250 ಹಾಸಿಗೆ ಸಾಮಥ್ರ್ಯವಿರುವ ಕೋವಿಡ್ ಕೇರ್ ಸೆಂಟರ್ ಆಗಿದೆ. ಚಿಕಿತ್ಸಾ ಆರೈಕೆ ನೀಡುವ ವೈದ್ಯಕೀಯ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದರು.

ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ, ತಹಶೀಲ್ದಾರ್ ಸತ್ಯನಾರಾಯಣ, ಜಿಲ್ಲಾ ಕಾರ್ಯಕ್ರಮ ಅನುಷ್ಟಾನಾಧಿಕಾರಿ ಡಾ.ಚಂದ್ರಶೇಖರ್ ಕಂಬಾಳಿಮಠ್, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್, ನಿಲಯ ಪಾಲಕ ಶಿವಕುಮಾರ್, ಬಿಸಿಎಂ ಇಲಾಖೆ ಅಧಿಕಾರಿಗಳು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *