ಚಿತ್ರದುರ್ಗ ನ. 04 : ವೀರ ಮದಕರಿ ಆಳಿದ ಚಿತ್ರದುರ್ಗದ ಐತಿಹಾಸಿಕ ಕೋಟೆಯನ್ನು 30 ಕೋಟಿ ರೂ. ವೆಚ್ಚದಲ್ಲಿ ವಿಶೇಷ ದೀಪಾಲಂಕಾರ, ಲೇಸರ್ ಬೆಳಕು, ನಾಡಿನ ಸಂಸ್ಕøತಿ, ರಾಷ್ಟ್ರೀಯ ನಾಯಕರ ವಿಚಾರಗಳನ್ನು ಬಿಂಬಿಸುವ ರೀತಿಯಲ್ಲಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವರು ಹಾಗೂ ಸಂಸದರಾದ ಎ. ನಾರಾಯಣಸ್ವಾಮಿ ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿತ್ರದುರ್ಗದ ಐತಿಹಾಸಿಕ ಕೋಟೆಯನ್ನು ಆಕರ್ಷಕವಾಗಿ ಹಾಗೂ ಈ ನಾಡಿನ ಸಂಸ್ಕøತಿ ಬಿಂಬಿಸುವ ರೀತಿಯಲ್ಲಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ಕೆಎಂಆರ್‍ಸಿ ಅನುದಾನದಲ್ಲಿ 30 ಕೋಟಿ ರೂ. ಅನುದಾನ ಒದಗಿಸಲಾಗಿದೆ.
ಪ್ರತಿ ಶನಿವಾರ ಮತ್ತು ಭಾನುವಾರದಂದು ದೇಶದ ಸಂಸ್ಕøತಿ, ರಾಜ್ಯದ ಸಂಸ್ಕøತಿ, ರಾಷ್ಟ್ರೀಯ ನಾಯಕರ ವಿಚಾರಧಾರೆಗಳನ್ನು ಲೇಸರ್ ಬೆಳಕಿನಲ್ಲಿ ವಿಶೇಷ ಧ್ವನಿ-ಬೆಳಕಿನ ಕಾರ್ಯಕ್ರಮ ಲಭ್ಯವಾಗುವಂತಿರಬೇಕು, ಕೋಟೆಗೆ ವಿಶೇಷ ದೀಪಾಲಂಕಾರ ಕೈಗೊಳ್ಳುವುದು ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಯೋಜಿಸಲಾಗಿದೆ, ಇದಕ್ಕಾಗಿ ಕ್ರಿಯಾ ಯೋಜನೆಯನ್ನು ಕೂಡ ಸಿದ್ಧಪಡಿಸಲಾಗಿದೆ. ಈಗಾಗಲೆ ಜಿಲ್ಲಾ ಮಟ್ಟದಲ್ಲಿ ಹಾಗೂ ದೆಹಲಿಯಲ್ಲಿಯೂ ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ಮಾಡಲಾಗಿದೆ. ಕೋಟೆಗೆ ವಿಶೇಷ ದೀಪಾಲಂಕಾರಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ಕೋಟೆಯಲ್ಲಿ ಥೀಮ್ ಪಾರ್ಕ್ ಮಾಡಬೇಕೆಂಬುದು ಬಹುಜನರ ಬೇಡಿಕೆಯಾಗಿದೆ. ಒಂದು ಭಾಗದಲ್ಲಿ ಥೀಮ್ ಪಾರ್ಕ್ ಮಾಡಬೇಕೆಂಬುದು ನಮ್ಮ ಆಶಯವಾಗಿದೆ. ಪುರಾತತ್ವ ಇಲಾಖೆಯಿಂದ ಕೆಲವೊಂದು ಆಕ್ಷೇಪಣೆಗಳು ವ್ಯಕ್ತವಾಗಿದ್ದವು, ಹೀಗಾಗಿ ಜಂಟಿ ಸಮೀಕ್ಷೆ ನಡೆಸಿ, ಡಿಸೈನ್ ಮಾಡಿಕೊಡಲು ತಿಳಿಸಲಾಗಿತ್ತು. ಇದೀಗ ಕ್ರಿಯಾ ಯೋಜನೆ ರೂಪಿಸಲಾಗಿದೆ. ಅದೇ ರೀತಿ ಚಂದ್ರವಳ್ಳಿಯನ್ನು ಕೂಡ ಅಭಿವೃದ್ದಿಪಡಿಸಲು 01 ಕೋಟಿ ರೂ. ಹಾಗೂ ಹೊಳಲ್ಕೆರೆ ರಸ್ತೆಯಲ್ಲಿರುವ ದೊಡ್ಡಹೊಟ್ಟೆ ರಂಗಸ್ವಾಮಿ ದೇವಸ್ಥಾನದ ಅಭಿವೃದ್ಧಿಗೂ ಕೂಡ 04.5 ಕೋಟಿ ರೂ. ಅನುದಾನ ಒದಗಿಸಲಾಗಿದೆ ಎಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಚಿತ್ರದುರ್ಗ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಶಶಿಕುಮಾರ್ ಇದ್ದರು.