ಜೈಪುರ: ರಾಜಸ್ಥಾನದ ಸಿಕಾರ್‌ನಲ್ಲಿರುವ ಖಾತು ಶ್ಯಾಮ್ ದೇವಸ್ಥಾನದಲ್ಲಿ ಸೋಮವಾರ ಬೆಳಗ್ಗೆ ಉಂಟಾದ ಕಾಲ್ತುಳಿತದಲ್ಲಿ ಕನಿಷ್ಠ ಮೂವರು ಯಾತ್ರಾರ್ಥಿಗಳು ಸಾವನ್ನಪ್ಪಿದ್ದು, ನಾಲ್ವರು ಗಂಭೀರ ಗಾಯಗೊಂಡಿದ್ದಾರೆ.
ಏಕಾದಶಿಯ ಸಂದರ್ಭದಲ್ಲಿ ದರ್ಶನಕ್ಕಾಗಿ ಅಪಾರ ಸಂಖ್ಯೆಯ ಭಕ್ತರು ಜಮಾಯಿಸಿದಾಗ ಬೆಳಿಗ್ಗೆ 5.00 ಗಂಟೆಗೆ ಕಾಲ್ತುಳಿತ ಸಂಭವಿಸಿದೆ ಎಂದು ವರದಿಯಾಗಿದೆ. ಭಾನುವಾರ ತಡರಾತ್ರಿಯಿಂದಲೇ ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದು, ಬೆಳಗ್ಗೆ ದೇವಸ್ಥಾನದ ಬಾಗಿಲು ತೆರೆದ ತಕ್ಷಣ ನೂಕುನುಗ್ಗಲು ಉಂಟಾಗಿದೆ.
ಏತನ್ಮಧ್ಯೆ, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಮೂವರು ಭಕ್ತರ ಸಾವಿಗೆ ಸಂತಾಪ ಸೂಚಿಸಿದ್ದಾರೆ ಮತ್ತು “ಸಿಕಾರ್‌ನಲ್ಲಿರುವ ಖಾತು ಶ್ಯಾಮ್ ಜಿ ಅವರ ದೇವಸ್ಥಾನದಲ್ಲಿ ಕಾಲ್ತುಳಿತದಿಂದ 3 ಮಹಿಳಾ ಭಕ್ತರು ಸಾವನ್ನಪ್ಪಿರುವುದು ತುಂಬಾ ದುಃಖ ಮತ್ತು ದುರದೃಷ್ಟಕರವಾಗಿದೆ. ಅವರ ಕುಟುಂಬಕ್ಕೆ ನನ್ನ ತೀವ್ರ ಸಂತಾಪವಿದೆ. ಭಗವಂತ ಅವರಿಗೆ ಈ ನಷ್ಟವನ್ನು ಭರಿಸುವ ಶಕ್ತಿಯನ್ನು ನೀಡಲಿ ಮತ್ತು ಅಗಲಿದ ಆತ್ಮಕ್ಕೆ ಶಾಂತಿ ಸಿಗಲಿ. ಕಾಲ್ತುಳಿತದಲ್ಲಿ ಗಾಯಗೊಂಡಿರುವ ಭಕ್ತರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.
ಮೃತರ ಶವಗಳನ್ನು ಖತು ಶ್ಯಾಮ್‌ಜಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಯಲಿದೆ. ಗಾಯಗೊಂಡವರನ್ನು ಶಿವಚರಣ್ (50), ಮನೋಹರ್ (40), ಕರ್ನಾಲ್‌ನ ಇಂದ್ರಾದೇವಿ (55), ಅಲ್ವಾರ್‌ನ ಅನೋಜಿ (40) ಎಂದು ಗುರುತಿಸಲಾಗಿದೆ. ಮನೋಹರ್ ಅವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಜೈಪುರಕ್ಕೆ ಕಳುಹಿಸಲಾಗಿದೆ.