ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.03 : ಸಂತ ಸೇವಾಲಾಲರ 285 ನೇ ಜಯಂತ್ಯೋತ್ಸವವನ್ನು ದಾವಣಗೆರೆ ಜಿಲ್ಲೆ ಸೂರಗೊಂಡನಕೊಪ್ಪದ ಬಾಯಾಗಡ್‍ನಲ್ಲಿ ಫೆ.13, 14, 15 ರಂದು ಆಚರಿಸಲಾಗುತ್ತಿದ್ದು, ಚಿತ್ರದುರ್ಗ ಜಿಲ್ಲೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಸೇವಾಲಾಲ್ ಭಕ್ತರು ಮತ್ತು ಬಂಜಾರ ಸಮಾಜದವರು ಆಗಮಿಸಬೇಕೆಂದು ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿಯ ಪ್ರಧಾನ ಕಾರ್ಯದರ್ಶಿ ನರೇನಹಳ್ಳಿ ಅರುಣ್‍ಕುಮಾರ್ ಮನವಿ ಮಾಡಿದ್ದಾರೆ.
ಇಲ್ಲಿನ ಪತ್ರಿಕಾ ಭವನದ ಮುಂಭಾಗ ಸಂತ ಸೇವಾಲಾಲರ ಜಯಂತ್ಯೋತ್ಸವದ ಆಹ್ವಾನ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಸಂತ ಸೇವಾಲಾಲರ ಜಯಂತ್ಯೋತ್ಸವವು ವಿಶಿಷ್ಟ ಹಾಗೂ ಅದ್ದೂರಿಯಾಗಿ ಆಚರಿಸುವ ಕಾರ್ಯಕ್ರಮವಾಗಿದ್ದು, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ.ಮಹದೇವಪ್ಪ, ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ, ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಸೇರಿದಂತೆ ಸಚಿವರು ಮತ್ತು ಶಾಸಕರುಗಳು ಭಾಗವಹಿಸಲಿದ್ದಾರೆ.
ಜಯಂತ್ಯೋತ್ಸವದ ನೇತೃತ್ವವನ್ನು ಸಂತಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿಯ ಅಧ್ಯಕ್ಷರು ಹಾಗೂ ಕರ್ನಾಟಕ ಸರ್ಕಾರದ ಉಪಸಭಾಧ್ಯಕ್ಷರಾದ ರುದ್ರಪ್ಪ ಮಾನಪ್ಪ ಲಮಾಣಿಯವರು ವಹಿಸಲಿದ್ದು, ಕಾರ್ಯಕ್ರಮದಲ್ಲಿ ಬಂಜಾರ ಸಮುದಾಯದ ಶಾಸಕರು, ಮಾಜಿ ಶಾಸಕರು, ಸಂಸದರು ಹಾಗೂ ಜಿಲ್ಲಾ ಪಂಚಾಯಿತಿ ತಾಲ್ಲೂಕು ಪಂಚಾಯಿತಿ ಸದಸ್ಯರುಗಳು ಸಂಘ ಸಂಸ್ಥೆಗಳ ಮುಖಂಡರು ಭಾಗವಹಿಸಲಿದ್ದಾರೆ.
ಸಂತ ಸೇವಾಲಾಲರ 285 ನೇ ಜಯಂತ್ಯೋತ್ಸವಕ್ಕೆ ದೇಶದ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಉತ್ತರ ಭಾರತದ ರಾಜ್ಯಗಳಿಂದ ಭಕ್ತಾಧಿಗಳು ಆಗಮಿಸಲಿದ್ದು, ಕರ್ನಾಟಕದ ಬಳ್ಳಾರಿ, ವಿಜಯನಗರ, ಕೊಪ್ಪಳ, ಗದಗ, ಬಾಗಲಕೋಟೆ, ದಾವಣಗೆರೆ, ಚಿತ್ರದುರ್ಗ, ಹಾವೇರಿ ಜಿಲ್ಲೆಗಳಿಂದ ಭಕ್ತಾಧಿಗಳು ಪಾದಯಾತ್ರೆ ಮೂಲಕ ಆಗಮಿಸಿ ತಮ್ಮ ಮಾಲೆಗಳನ್ನು ಸಂತ ಸೇವಾಲಾಲರ ಜಯಂತ್ಯೋತ್ಸವದಲ್ಲಿ ಅಂತ್ಯಗೊಳಿಸಿ ಭಗವಾನ್ ಸಂತ ಸೇವಾಲಾಲರ ಕೃಪಾಶೀರ್ವಾದಗಳಿಗೆ ಪಾತ್ರರಾಗಲಿದ್ದಾರೆ. ಚಿತ್ರದುರ್ಗ ಜಿಲ್ಲೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುವ ಭಕ್ತಾಧಿಗಳಿಗೆ ಊಟೋಪಚಾರ ಮತ್ತು ವಸತಿ ಸೌಲಭ್ಯ ಕಲ್ಪಿಸಲಾಗುತ್ತದೆಂದು ಪ್ರಧಾನ ಕಾರ್ಯದರ್ಶಿ ನರೇನಹಳ್ಳಿ ಅರುಣ್‍ಕುಮಾರ್ ತಿಳಿಸಿದರು.
ಆಹ್ವಾನ ಪತ್ರಿಕೆ ಬಿಡುಗಡೆ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಜಾನಾಯ್ಕ, ನಾಗೇಂದ್ರನಾಯ್ಕ, ನಿವೃತ್ತ ಶಿಕ್ಷಕ ಮಂಜನಾನಾಯ್ಕ, ಗ್ರಾಮ ಪಂಚಾಯಿತಿ ಸದಸ್ಯ ಮದಕರಿಪುರ ತಿಪ್ಪೇಸ್ವಾಮಿ, ಕರ್ನಾಟಕ ಬಂಜಾರ ಜನಜಾಗೃತಿ ಅಭಿಯಾನ ಸಮಿತಿಯ ಗಣೇಶ್‍ನಾಯ್ಕ, ರಮೇಶ್‍ನಾಯ್ಕ, ಚನ್ನಯ್ಯನಹಟ್ಟಿ ತಿಪ್ಪೇಶ್‍ನಾಯ್ಕ, ಜಯರಾಂ ನಾಯ್ಕ, ಕಾಂಗ್ರೆಸ್ ವಿದ್ಯಾರ್ಥಿ ಘಟಕದ ಅಧ್ಯಕ್ಷ ಪ್ರಕಾಶ್ ರಾಮನಾಯ್ಕ, ಮದಕರಿಪುರ ಕೃಷ್ಣನಾಯ್ಕ, ಹಾಲಾನಾಯ್ಕ, ಶಿವನಾಯ್ಕ, ಗೋವಿಂದನಾಯ್ಕ, ಭೀಮಸಮುದ್ರದ ಸುರೇಶ, ದಲಿತ ಸಂಘಟನೆ ಮುಖಂಡ ಕಣಿವೆಮಾರಮ್ಮ ತಿಪ್ಪೇಸ್ವಾಮಿ, ಆನಂದಕುಮಾರ್, ರಾಘ್ಯನಾಯ್ಕ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.