ಇತ್ತೀಚೆಗೆ ನಡೆದ ಅಜರ್‌ಬೈಜಾನ್ ಏರ್‌ಲೈನ್ಸ್ ವಿಮಾನ ಅಪಘಾತವನ್ನು ಮರೆಯುವ ಮುನ್ನವೇ ಮತ್ತೊಂದು ದುರಂತ ನಡೆದಿದೆ. ದಕ್ಷಿಣ ಕೊರಿಯಾದಲ್ಲಿ ಭೀಕರ ವಿಮಾನ ಅಪಘಾತ ಸಂಭವಿಸಿದೆ. 181 ಜನರಿದ್ದ ಬೋಯಿಂಗ್ 737-800 ವಿಮಾನವು ಮುವಾನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತನಗೊಂಡಿದೆ.

ಈ ಅಪಘಾತದಲ್ಲಿ ಈವರೆಗೂ 28 ಮಂದಿ ಸಾವನ್ನಪ್ಪಿದ್ದಾರೆ. ಆದರೆ ಈ ಅಪಘಾತದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತದ ಸಮಯದಲ್ಲಿ ವಿಮಾನದಲ್ಲಿ 6 ಸಿಬ್ಬಂದಿ ಮತ್ತು 175 ಪ್ರಯಾಣಿಕರಿದ್ದರು. ಲ್ಯಾಂಡಿಂಗ್ ಸಮಯದಲ್ಲಿ, ವಿಮಾನವು ರನ್‌ವೇಯಿಂದ ಸ್ಕಿಡ್ ಆಗಿ ಗಡಿ ಗೋಡೆಗೆ ಅಪ್ಪಳಿಸಿತು ಎಂದು ವರದಿಯಾಗಿದೆ.

ಗೋಡೆಗೆ ಡಿಕ್ಕಿ ಹೊಡೆದ ನಂತರ ವಿಮಾನವು ಹೊತ್ತಿ ಉರಿದಿದೆ. ಇದರಿಂದ ವಿಮಾನ ನಿಲ್ದಾಣದಲ್ಲಿ ಗೊಂದಲ ಉಂಟಾಗಿತ್ತು. ತಕ್ಷಣ ಸ್ಪಂದಿಸಿದ ಸಿಬ್ಬಂದಿ ಮುವಾನ್ ವಿಮಾನ ನಿಲ್ದಾಣದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು. ದಕ್ಷಿಣ ಕೊರಿಯಾದ ಹಂಗಾಮಿ ಅಧ್ಯಕ್ಷ ಚೋಯ್ ಸಾಂಗ್ ಮೂ ವಿಮಾನ ಅಪಘಾತದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಮುವಾನ್ ವಿಮಾನ ನಿಲ್ದಾಣದಲ್ಲಿ ತಕ್ಷಣದ ರಕ್ಷಣಾ ಕಾರ್ಯಾಚರಣೆಗೆ ಅವರು ಆದೇಶಿಸಿದರು.
ಇತ್ತೀಚೆಗೆ ಅಜರ್‌ಬೈಜಾನ್ ಏರ್‌ಲೈನ್ಸ್‌ನ ಜೆ28243 ವಿಮಾನ ಅಪಘಾತಕ್ಕೀಡಾಗಿ 38 ಮಂದಿ ಸಾವನ್ನಪ್ಪಿದ್ದರು. ಬಾಕುದಿಂದ ರಷ್ಯಾದ ಚೆಚೆನ್ಯಾ ಪ್ರದೇಶಕ್ಕೆ ಪ್ರಯಾಣಿಸುತ್ತಿದ್ದ ವಿಮಾನವು ಕಜಕಿಸ್ತಾನದಲ್ಲಿ ಪತನಗೊಂಡಿತ್ತು.

