ಗದಗ: ಮಳೆ ಗಾಳಿ ಶುರುವಾಗಿದೆ. ಅಲ್ಲಲ್ಲಿ ಸಿಡಿಲು ಬಡಿದು ದುರಂತ ನಡೆಯುತ್ತಿರುವ ಘಟನೆಗಳು ಬೆಳಕಿಗೆ ಬಂದಿವೆ. ಇದೀಗ ಗದಗ ಜಿಲ್ಲೆಯಲ್ಲಿ ಸಿಡಿಲಿಗೆ 24 ಕುರಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ. ಆದರೆ ಅದೃಷ್ಟವಶಾತ್ ಕುರಿಗಾಹಿಗಳು ಬದುಕುಳಿದಿದ್ದಾರೆ.
ಅಸುಂಡಿ ಗ್ರಾಮದ ನಿವಾಸಿಯಾಗಿರುವ ನಾಗಪ್ಪ ಸಾಸವಿಹಳ್ಳಿ ಮತ್ತು ಈತನ ಸಂಬಂಧಿ ಬಾಲಕ ಪ್ರಮೋದ್ ಕುರಿಗಳನ್ನು ಮೇಯಿಸಲು ಹೋಗಿದ್ದರು. ಇನ್ನೇನು ಸಂಜೆ ವೇಳೆಗೆ ಕುರಿಗಳನ್ನೆಲ್ಲಾ ಮೇಯಿಸಿ, ಸಂಜೆ ವಾಪಾಸ್ ಆಗುವ ವೇಳೆಗೆ ಕುರಿಗಾಹಿಗಳಿಗೆ ಬರ ಸಿಡಿಲು ಬಡಿದಂತಾಗಿದೆ. ಸಿಡಿಲು ಬಡಿದು 24 ಕುರಿಗಳು ಸಾವನ್ನಪ್ಪಿವೆ. ಅದೃಷ್ಟವಶಾತ್ ಕುರಿಗಾಹಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಳೆ ಗಾಳಿ ಹೆಚ್ಚಾಗಿದ್ದ ಕಾರಣ, ಮರದ ಕೆಳಗಡೆ ಆಶ್ರಯ ಪಡೆದಿದ್ಸ ಕುರಿಗಾಹಿಗಳು ಮಳೆ ಹೆಚ್ಚಾದ ಬೆನ್ನಲ್ಲೇ ಪಕ್ಕದಲ್ಲಿಯೇ ಇದ್ದ ಕಟ್ಟಡದ ಒಳಗೆ ನಿಂತಿದ್ದರು. ಆದರೆ ಅದೆ ಕಟ್ಟಡಕ್ಕೆ ಸಿಡಿಲು ಬಡಿದಿದೆ. ಕಟ್ಟಡ ನೋಡ ನೋಡುತ್ತಿದ್ದಂತೆ ಉರುಳಿ ಬಿದ್ದಿದ್ದು, ಕುರಿಗಳ ಜೊತೆಗೆ ಕುರುಗಾಹಿಗಳು ಅವಶೇಷಗಳಡಿ ಸಿಲುಕಿದ್ದಾರೆ. ಅದರೆ ಅವಶೇಷಗಳೊಡನೆ ಸಿಲುಕಿದ್ದ ನಾಗಪ್ಪ ಕಷ್ಟಪಟ್ಟು ಹೊರ ಬಂದಿದ್ದಾನೆ. ಪ್ರಜ್ಞೆ ತಪ್ಪಿದ್ದ ಬಾಲಕನನ್ನು ಹೊರ ಎಳೆದು ತಂದಿದ್ದಾನೆ. ಅದೃಷ್ಟವಶಾತ್ ಇಬ್ಬರು ಬದುಕುಳಿದಿದ್ದಾರೆ. ಆದರೆ ಕುರಿಗಳು ಸಾವನ್ನಪ್ಪಿವೆ.