ಹೈದ್ರಾಬಾದ್: ಕಾಲ ಬದಲಾದರೂ ಮನುಷ್ಯರ ಕೆಲವೊಂದು ಮನಸ್ಥಿತಿ ಬದಲಾಗಿಲ್ಲ. ಅದರಲ್ಲೂ ಜಾತಿ ವಿಚಾರದಲ್ಲಂತು ಇಷ್ಟು ಶತಮಾನಗಳಾದರೂ ಬದಲಾಯಿಸಿಕೊಂಡಿಲ್ಲ. ಮೊನ್ನೆ ಮೊನ್ನೆಯಷ್ಟೇ ಪ್ರೀತಿಸಿ ಮದುವೆಯಾಗಿದ್ದಕ್ಕೆ ದಲಿತ ಯುವಕನನ್ನು ಕೊಚ್ಚಿ ಕೊಲೆ ಮಾಡಲಾಗಿತ್ತು. ಇದೀಗ ಮತ್ತೊಂದು ಮರ್ಯಾದ ಹತ್ಯೆ ದಾಖಲಾಗಿದೆ.
25 ವರ್ಷದ ನೀರಜ್ ಪನ್ವರ್ ಎಂಬಾತನನ್ನು ಐವರು ದುಷ್ಕರ್ಮಿಗಳು ಚುಚ್ಚಿ ಕೊಲೆ ಮಾಡಿದ್ದಾರೆ. ನಗರದ ಬೇಗಂ ಬಜಾರ್ ನಲ್ಲಿ ಈ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಶಾಹೀನಾಥ್ ಗಂಜ್ ಪೊಲೀಸರು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿದ್ದಾರೆ. ಅದರಲ್ಲಿ ಐವರು ಏಕಾಏಕಿ ದಾಳಿ ಮಾಡಿ, ಕೊಲೆ ಮಾಡಿರುವುದು ತಿಳಿದು ಬಂದಿದೆ.
ನೀರಜ್ ಕಳೆದ ವರ್ಷ ಸಂಜನಾ ಎಂಬ ಹುಡುಗಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಇಬ್ಬರಿಗೂ ಒಂದು ಗಂಡು ಮಗುವಿದೆ. ಅದು ಇತ್ತೀಚೆಗಷ್ಟೆ ಸಂಜನಾ ಆ ಮಗುವಿಗೆ ಜನ್ಮ ನೀಡಿದ್ದಳು. ಆದರೆ ಇಂಥ ಖುಷಿಯ ಮಧ್ಯೆಯೇ ನೀರಜ್ ನನ್ನು ಕೊಲೆ ಮಾಡಿದ್ದಾರೆ. ಈ ಕೊಲೆಯನ್ನು ನೀರಜ್ ಪೋಷಕರು ಸೊಸೆಯ ಸಂಬಂಧಿಕರೆ ಮಾಡಿದ್ದಾರೆಂದು ಆರೋಪಿಸಿದ್ದಾರೆ.