ಕಡೆಗೂ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವಿನ ಮುನಿಸು ದೂರವಾಗಿದೆ. ಇಬ್ಬರಲ್ಲಿ ಒಬ್ಬರನ್ನು ಸಿಎಂ ಮಾಡಲು ಹಾಗೂ ಒಬ್ಬರಿಗೆ ಡಿಸಿಎಂ ಹುದ್ದೆ ನೀಡಲು ಹೈಕಮಾಂಡ್ ತೀರ್ಮಾನ ಮಾಡಿದೆ. ಕಳೆದ ಎರಡ್ಮೂರು ದಿನದಿಂದ ದೆಹಲಿಯಲ್ಲಿಯೇ ಬೀಡು ಬಿಟ್ಟ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರನ್ನು ಕಡೆಗೂ ಒಂದು ನಿರ್ಧಾರಕ್ಕೆ ತಂದು ಸಮಾಧಾನ ಮಾಡಿದ್ದಾರೆ. ದೆಹಲಿಯಿಂದ ಬೆಂಗಳೂರಿನ ಕಡೆಗೆ ಹೊರಟಿರುವ ಇಬ್ಬರು ನಾಯಕರು ಶನಿವಾರ ಅಂದ್ರೆ ಮೇ 20ರಂದು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.
ಈ ಬಾರಿ ಪಕ್ಷ ಸಂಘಟನೆ ಮಾಡಿ, ಅಧಿಕಾರಕ್ಕೆ ತರುವಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಪಾತ್ರವೂ ಮಹತ್ವದ್ದಾಗಿದೆ. ಹೀಗಾಗಿ ಇಬ್ಬರು ನಾಯಕರು ಪಟ್ಟು ಸಡಿಲಿಸದೆ ನಮಗೆ ಬೇಕು ನಮಗೆ ಬೇಕು ಅಂತ ಕಾದು ಕೂತಿದ್ದರು. ಡಿಕೆ ಶಿವಕುಮಾರ್ ಅವರಿಗೆ ಸಮಾಧಾನ ಮಾಡಿರುವ ಹೈಕಮಾಂಡ್ ಡಿಸಿಎಂ ಹುದ್ದೆ ಜೊತೆಗೆ ಜಲಸಂಪನ್ಮೂಲ ಹಾಗೂ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ನೀಡಿದೆ.
ಹಣಕಾಸು ಖಾತೆಗಾಗಿ ಡಿಕೆ ಶಿವಕುಮಾರ್ ಡಿಮ್ಯಾಂಡ್ ಇಟ್ಟಿದ್ದರು ಎನ್ನಲಾಗಿದೆ. ಆದರೆ ಸಿದ್ದರಾಮಯ್ಯ ಅವರು ಆ ಖಾತೆಯನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ. ಜೊತೆಗೆ ಡಿಕೆ ಶಿವಕುಮಾರ್ ಅವರು ಮತ್ತೊಂದು ಕಂಡೀಷನ್ ಹಾಕಿದ್ದು, ಡಿಸಿಎಂ ಹುದ್ದೆ ಒಂದೇ ಇರಬೇಕು ಎಂದಿದ್ದಾರೆ. ಹೈಕಮಾಂಡ್ ಕೂಡ ಒಪ್ಪಿಗೆ ಸೂಚಿಸಿದೆ. ಈ ಮೂಲಕ ಡಿಸಿಎಂ ಕನಸು ಕಾಣುತ್ತಿದ್ದ ಹಿರಿಯರಿಗೆ ಬೇಸರವಾಗಿದೆ.