ಬೆಂಗಳೂರು: ಒಂದಲ್ಲ ಎರಡಲ್ಲ ಹದಿನೆಂಟು ಬಸ್ ಗಳು ಹೊತ್ತಿ ಉರೊದಿರುವ ಘಟನೆ ಬೆಂಗಳೂರಿನ ವೀರಭದ್ರ ನಗರದಲ್ಲಿ ನಡೆದಿದೆ. ಹದಿನೆಂಟು ಬಸ್ ಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರದಾಹಸ ಪಟ್ಟಿದ್ದು, ಸದ್ಯ ಬೆಂಕಿ ನಂದಿದೆ. ಆದರೆ ಬಸ್ ಗಳೆಲ್ಲ ಭಸ್ಮವಾಗಿದೆ.
ವೀರಭದ್ರ ನಗರದಲ್ಲಿ ಎಸ್ ವಿ ಕೋಚ್ ಎಂಬ ಗ್ಯಾರೇಜ್ ಇದೆ. ಈ ಗ್ಯಾರೇಜ್ ಅನ್ನು ಹಲವು ವರ್ಷಗಳಿಂದ ಶ್ರೀನಿವಾಸ್ ಎಂಬುವವರು ನಡೆಸಿಕೊಂಡು ಬರುತ್ತಿದ್ದಾರೆ. ಇದರ ಒಳಗೆ ಕಟ್ಟಿಂಗ್ ಮತ್ತು ಫಿಟ್ಟಿಂಗ್ ಮಾಡಲಾಗುತ್ತದೆ. ಅದಕ್ಕೆ ವೆಲ್ಡಿಂಗ್ ಮಷಿನದ ಬಳಕೆ ಮಾಡಲಾಗುತ್ತಿತ್ತು. ಹೀಗೆ ವೆಲ್ಡಿಂಗ್ ಮಷಿನ್ ಬಳಸುವ ವೇಳೆ ಬೆಂಕಿ ಹೊತ್ತಿಕೊಂಡಿರೋ ಶಂಕೆ ವ್ಯಕ್ತವಾಗಿದೆ.
ಕಳೆದ ಹದಿನೈದು ವರ್ಷಗಳಿಂದ ಈ ಗ್ಯಾರೇಜ್ ನಲ್ಲಿ ಹಳೆಯ ಬಸ್ ಗಳ ರಿಪೇರಿ ಮಾಡಲಾಗುತ್ತಿತ್ತು. ಸುಮಾರು ಮೂರು ಎಕರೆ ಪ್ರದೇಶದಲ್ಲಿ ಈ ಗ್ಯಾರೇಜ್ ಮಾಡಲಾಗಿತ್ತು. ಹಳೆ ಬಸ್ ಗಳಿಗೆ ಹೊಸ ರೂಪ ಕೊಡುವ ಕೆಲಸವಾಗುತ್ತಿತ್ತು. ಆದರೆ ಈಗ ದೊಡ್ಡ ಅನಾಹುತವೇ ಸಂಭವಿಸಿದೆ. ಹದಿನೆಂಟು ಬಸ್ ಗಳು ಸುಟ್ಟು ಭಸ್ಮವಾಗಿವೆ. ಇನ್ನುಳಿದ ಹತ್ತು ಬಸ್ ಗಳಿಗೆ ಯಾವುದೇ ಹಾನಿಯಾಗಿಲ್ಲ. ಇನ್ನೂ ಈ ಗ್ಯಾರೇಜ್ ಗೆ ಅಗ್ನಿಶಾಮಕ ದಳದಿಂದ NOC ಕೂಡ ನೀಡಿರಲಿಲ್ಲ. ಗ್ಯಾರೇಜ್ ಒಳಗೆ ಯಾವುದೇ ಸೇಫ್ಟೀ ಮಾಡಿರಲಿಲ್ಲ. ಈ ಕಾರಣದಿಂದಾಗಿಯೇ ಈ ದುರಂತ ಸಂಭವಿಸಿದೆ ಎನ್ನಲಾಗ್ತಾ ಇದೆ.