ಚಿಕ್ಕಬಳ್ಳಾಪುರ: ರಸ್ತೆ ಬದಿಯಲ್ಲಿ ನಿಂತಿದ್ದ ಸಿಮೆಂಟ್ ಲೋಡ್ ಗಾಡಿಗೆ ಜೀಪು ಗುದ್ದಿದ ಪರಿಣಾಮ ಸ್ಥಳದಲ್ಲಿಯೇ ಹದಿಮೂರು ಜನ ಸಾವನ್ನಪ್ಪಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ. ಈ ಘಟನೆ ಚಿಕ್ಕಬಳ್ಳಾಪುರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 44ರ ಚಿತ್ರಾವಳಿ ಬಳಿ ನಡೆದಿದೆ. ಗಾಯಾಳುಗಳನ್ನು ನಗರ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.
ಮಂಜು ಕವಿದ ವಾತಾವರಣವಿದ್ದ ಕಾರಣ, ಮುಂದೆ ನಿಂತಿದ್ದ ಲಾರಿ, ಜೀಪು ಚಾಲಕನಿಗೆ ಕಂಡಿಲ್ಲ ಎನ್ನಲಾಗುತ್ತಿದೆ. ಹೀಗಾಗಿಯೇ ಅಪಘಾತ ಸಂಭವಿಸಿರಬಹುದು ಎನ್ನಲಾಗುತ್ತಿದೆ. ಅಪಘಾತದ ರಭಸಕ್ಕೆ ಟಾಟಾ ಸುಮೋ ನಜ್ಜುಗುಜ್ಜಾಗಿದೆ. ಈ ಸಂಬಂಧ ಚಿಕ್ಕಬಳ್ಳಾಪುರ ವರಿಷ್ಠಾಧಿಕಾರಿ ಡಿ ಎಲ್ ನಾಗೇಶ್ ಮಾಹಿತಿ ನೀಡಿದ್ದು, ಮಗು, ಮೂವರು ಮಹಿಳೆಯರು ಸೇರಿ ಹದಿಮೂರು ಜನ ಸಾವನ್ನಪ್ಪಿದ್ದಾರೆ. ಮೃತರೆಲ್ಲಾ ಆಂಧ್ರದವರು. ಬೆಂಗಳೂರಿನ ಬೊಮ್ಮನಹಳ್ಳಿಗೆ ಪ್ರಯಾಣ ಬೆಳೆಸಿದ್ದರು. ಏಳು ಜನರ ಸೀಟಿನ ಸಾಮರ್ಥ್ಯದ ಟಾಟಾ ಸುಮೋದಲ್ಲಿ ಹದಿಮೂರು ಜನ ಪ್ರಯಾಣ ಬೆಳೆಸಿದ್ದರು ಎಂದು ಮಾಹಿತಿ ನೀಡಿದ್ದಾರೆ.
ಇನ್ನು ಭೀಕರ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಲಾ ಎರಡು ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಕೋರಿರುವ ಮುಖ್ಯಮಂತ್ರಿಗಳು ಘಟನೆ ಕುರಿತಾಗಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ.