ಸುದ್ದಿಒನ್ : ಪಾಕಿಸ್ತಾನದ ವಜೀರಿಸ್ತಾನ್ ಪ್ರದೇಶದಲ್ಲಿ ಆತ್ಮಹತ್ಯಾ ದಾಳಿ ನಡೆದಿದೆ. ಸ್ಫೋಟಕಗಳಿಂದ ತುಂಬಿದ್ದ ಕಾರು ಪಾಕಿಸ್ತಾನಿ ಸೈನಿಕರ ಬೆಂಗಾವಲು ಪಡೆಯ ವಾಹನಕ್ಕೆ ಡಿಕ್ಕಿ ಹೊಡೆದಾಗ ಈ ಭಾರಿ ಸ್ಫೋಟ ಸಂಭವಿಸಿದೆ. ದಾಳಿಯಲ್ಲಿ 13 ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ. ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂದು ಪಾಕಿಸ್ತಾನಿ ಸೇನೆ ಆರೋಪಿಸಿದೆ. ಭಾರತೀಯ ವಿದೇಶಾಂಗ ಸಚಿವಾಲಯ (MEA) ಭಾನುವಾರ ಈ ಆರೋಪಗಳನ್ನು ತಳ್ಳಿ ಹಾಕಿದೆ.
“ಜೂನ್ 28 ರಂದು ವಜಿರಿಸ್ತಾನ್ ಮೇಲಿನ ದಾಳಿಗೆ ಭಾರತವನ್ನು ದೂಷಿಸಿ ಪಾಕಿಸ್ತಾನ ಸೇನೆ ಹೊರಡಿಸಿದ ಅಧಿಕೃತ ಹೇಳಿಕೆಯನ್ನು ನಾವು ನೋಡಿದ್ದೇವೆ. ಈ ಹೇಳಿಕೆಯನ್ನು ನಾವು ಬಲವಾಗಿ ಖಂಡಿಸುತ್ತೇವೆ ಮತ್ತು ತಿರಸ್ಕರಿಸುತ್ತೇವೆ” ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ರಣಧೀರ್ ಜೈಸ್ವಾಲ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಖೈಬರ್ ಪಖ್ತುನ್ಖ್ವಾದ ಉತ್ತರ ವಜಿರಿಸ್ತಾನ್ ಜಿಲ್ಲೆಯಲ್ಲಿ ಶನಿವಾರ ಪಾಕಿಸ್ತಾನಿ ಮಿಲಿಟರಿ ಬೆಂಗಾವಲು ಪಡೆಯ ಮೇಲೆ ಸ್ಫೋಟಕಗಳಿಂದ ತುಂಬಿದ ಆತ್ಮಹತ್ಯಾ ವಾಹನ ದಾಳಿ ನಡೆಸಿತು. 13 ಸೈನಿಕರನ್ನು ಬಲಿತೆಗೆದುಕೊಂಡ ಈ ದಾಳಿಯನ್ನು ಫಿಟ್ನಾ-ಅಲ್-ಖವಾರಿಜ್ ನಡೆಸಿದೆ ಎಂದು ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ISPR) ಹೇಳಿಕೆಯಲ್ಲಿ ತಿಳಿಸಿದೆ ಎಂದು ದಿ ಡಾನ್ ವರದಿ ಮಾಡಿದೆ.
ಆತ್ಮಾಹುತಿ ಬಾಂಬರ್ ಸ್ಫೋಟಕಗಳಿಂದ ತುಂಬಿದ ವಾಹನವನ್ನು ಮಿಲಿಟರಿ ಬೆಂಗಾವಲು ಪಡೆಯ ವಾಹನವನ್ನು ಡಿಕ್ಕಿ ಹೊಡೆದಿದೆ. ಈ ದಾಳಿಯಲ್ಲಿ 13 ಸೈನಿಕರು ಸಾವನ್ನಪ್ಪಿದರು, 10 ಸೈನಿಕರು ಗಾಯಗೊಂಡರು ಮತ್ತು 19 ನಾಗರಿಕರು ಗಾಯಗೊಂಡರು ಎಂದು ಉತ್ತರ ವಜೀರಿಸ್ತಾನ್ ಜಿಲ್ಲೆಯ ಸ್ಥಳೀಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದಕ್ಷಿಣ ವಜೀರಿಸ್ತಾನ್‌ನಲ್ಲಿ ಗುಪ್ತಚರ ಆಧಾರಿತ ಕಾರ್ಯಾಚರಣೆ (ಐಬಿಒ)ಯಲ್ಲಿ ಇಬ್ಬರು ಸೈನಿಕರು ಸಾವನ್ನಪ್ಪಿ 11 ಉಗ್ರರು ಸಾವನ್ನಪ್ಪಿದ ಕೆಲವು ದಿನಗಳ ನಂತರ ಈ ದಾಳಿ ನಡೆದಿದೆ ಎಂದು ದಿ ಡಾನ್ ಪತ್ರಿಕೆ ವರದಿ ಮಾಡಿದೆ. ಇತ್ತೀಚಿನ ಬಾಂಬ್ ದಾಳಿಯ ಹೊಣೆಯನ್ನು ಯಾವುದೇ ಗುಂಪು ಇನ್ನೂ ಹೊತ್ತುಕೊಂಡಿಲ್ಲ. ಪಾಕಿಸ್ತಾನ ಭಾರತದ ವಿರುದ್ಧ ಆಧಾರರಹಿತ ಆರೋಪಗಳನ್ನು ಹೊರಿಸಿದೆ.
2021 ರಲ್ಲಿ ಕಾಬೂಲ್‌ನಲ್ಲಿ ತಾಲಿಬಾನ್ ಮತ್ತೆ ಅಧಿಕಾರಕ್ಕೆ ಬಂದ ನಂತರ, ಪಾಕಿಸ್ತಾನದ ಅಫ್ಘಾನಿಸ್ತಾನದ ಗಡಿಯಲ್ಲಿರುವ ಪ್ರದೇಶಗಳಲ್ಲಿ ಹಿಂಸಾಚಾರ ಗಮನಾರ್ಹವಾಗಿ ಹೆಚ್ಚಾಗಿದೆ. ಈ ವರ್ಷದ ಆರಂಭದಿಂದಲೂ, ಖೈಬರ್ ಪಖ್ತುನ್ಖ್ವಾ ಮತ್ತು ಬಲೂಚಿಸ್ತಾನ ಎರಡರಲ್ಲೂ ಸರ್ಕಾರದೊಂದಿಗೆ ಹೋರಾಡುವ ಸಶಸ್ತ್ರ ಗುಂಪುಗಳ ದಾಳಿಯಲ್ಲಿ ಸುಮಾರು 290 ಜನರು, ಹೆಚ್ಚಾಗಿ ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ.
