ಚಿಕ್ಕಮಗಳೂರು: ದಿನೇ ದಿನೇ ಮಕ್ಕಳಲ್ಲಿ ಕೊರೊನಾ ಹೆಚ್ಚಾಗುತ್ತಿರುವುದು ಭಯದ ವಾತಾವರಣವನ್ನ ಸೃಷ್ಟಿ ಮಾಡಿದೆ. ಮಕ್ಕಳನ್ನ ಶಾಲೆಗೆ ಕಳುಹಿಸಬೇಕಾ ಅಥವಾ ಮತ್ತೆ ಆನ್ಲೈನ್ ಮೊರೆ ಹೋಗುವುದಾ ಎಂಬ ಗೊಂದಲದಲ್ಲಿದ್ದಾರೆ. ಈ ಮಧ್ಯೆ ಶಾಲೆಗಳಲ್ಲೇ ಕೊರೊನಾ ಹೆಚ್ಚಾಗುತ್ತಿದೆ.
ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಜೀವನ್ ಜ್ಯೋತಿ ಖಾಸಗಿ ಶಾಲೆಯಲ್ಲಿ ಕೊರೊನಾ ಹೆಚ್ಚಾಗಿದೆ. ಈ ಶಾಲೆ ಒಂದರಲ್ಲೇ 11 ಜನರಿಗೆ ಕೊರೊನಾ ದೃಢವಾಗಿದೆ. ಒಂದೇ ಶಾಲೆಯಲ್ಲಿ 10 ಶಿಕ್ಷಕರಿಗೆ ಕೊರೊನಾ ಪಾಸಿಟಿವ್ ಆಗಿದೆ. ಅದರಲ್ಲಿ ಒಬ್ಬ ವಿದ್ಯಾರ್ಥಿಯಲ್ಲೂ ಸೋಂಕು ಕಾಣಿಸಿಕೊಂಡಿದೆ.
ಇದು ಸಹಜವಾಗಿಯೇ ಇನ್ನುಳಿದ ಶಿಕ್ಷಕರು, ವಿದ್ಯಾರ್ಥಿಗಳಿಗೆ ಸೋಂಕಿನ ಭಯ ಕಾಡೋದಕ್ಕೆ ಶುರು ಮಾಡಿದೆ. ಈಗಾಗಲೇ ಸೋಂಕಿತರನ್ನ ಅವರವರ ಮನೆಗಳಲ್ಲೇ ಐಸೋಲೇಷನ್ ಮಾಡಲಾಗಿದೆ. ಶಾಲೆಯಲ್ಲಿ ಟೆಸ್ಟ್ ಮುಂದುವರೆದಿದ್ದು, ಒಂದು ವಾರಗಳ ಕಾಲ ಶಾಲೆ ಸೀಲ್ಡೌನ್ ಮಾಡಲು ಜಿಲ್ಲಾಧಿಕಾರಿ ರಮೇಶ್ ಆದೇಶ ಹೊರಡಿಸಿದ್ದಾರೆ. ಇನ್ನು ಇತ್ತೀಚೆಗಷ್ಟೇ ಸಿಗೋಡಿನ ನವೋದಯ ಶಾಲೆಯಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿತ್ತು.