108 -ಸಹಾಯವಾಣಿಯಲ್ಲಿ ತಾಂತ್ರಿಕ ದೋಷ, ಜನರಿಗೆ ತೊಂದರೆಯಾಗದಂತೆ ಅಗತ್ಯ ವ್ಯವಸ್ಥೆಗೆ ಕ್ರಮ: ಸಚಿವ ಸುಧಾಕರ್

suddionenews
1 Min Read

ಬೆಂಗಳೂರು: 108 -ಆಂಬ್ಯುಲೆನ್ಸ್ ಸೇವೆಗಳ ಸಹಾಯವಾಣಿಯಲ್ಲಿ ಕೆಲ ತಾಂತ್ರಿಕ ಸಮಸ್ಯೆಗಳು ಸೃಷ್ಟಿಯಾಗಿದ್ದು ಅದಕ್ಕೆ ಪೂರಕವಾಗಿ ಕ್ರಮ ತೆಗೆದುಕೊಳ್ಳಲಾಗಿದೆ. ರಾಜ್ಯದ ಜನರು ಈ ಕುರಿತು ಯಾವುದೇ ಆತಂಕಕ್ಕೊಳಗಾಗುವುದು ಬೇಡ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.

ಐಟಿ ಹಾರ್ಡ್‌ವೇರ್‌ನಲ್ಲಿ ಸಮಸ್ಯೆ ಸೃಷ್ಟಿಯಾಗಿದ್ದು, ಅದನ್ನು ಗುತ್ತಿಗೆ ಪಡೆದುಕೊಂಡಿರುವ GVK-EMRI ಸಂಸ್ಥೆ ಶೀಘ್ರದಲ್ಲೇ ಬಗೆಹರಿಸಲಿದೆ. ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗಬಾರದು ಅನ್ನುವ ನಿಟ್ಟಿನಲ್ಲಿ ಇಲಾಖೆ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. 108 -ಸಹಾಯವಾಣಿ ಕರೆಗಳು ಆಟೋಮ್ಯಾಟಿಕ್ ಆಗಿ ಕರೆಗಳನ್ನು ಸ್ವೀಕರಿಸಿ 2 ನಿಮಿಷಗಳಲ್ಲಿ ಆಂಬ್ಯುಲೆನ್ಸ್ ವಾಹನ ಹಂಚಿಕೆ ಕಾರ್ಯ ಮಾಡುತ್ತಿತ್ತು.

ತಾಂತ್ರಿಕ ಸಮಸ್ಯೆಯಿಂದ ಈಗ ಈ ಪ್ರಕ್ರಿಯೆಗೆ 6 ರಿಂದ 7 ನಿಮಿಷಗಳ ಕಾಲ ತೆಗೆದುಕೊಳ್ಳಲಾಗುತ್ತಿದೆ. ಪ್ರತಿದಿನ 7 ರಿಂದ 8 ಸಾವಿರ ಕರೆಗಳ ಬದಲು 2 ರಿಂದ 2.5 ಸಾವಿರ ಕರೆಗಳನ್ನು ಮಾತ್ರ ಸ್ವೀಕರಿಸಲು ಸಾಧ್ಯವಾಗುತ್ತಿದೆ.

ಈಗಾಗಲೇ ಎಲ್ಲಾ ಆಸ್ಪತ್ರೆಗಳಿಗೆ ಇಂಟರ್ ಫೆಸಿಲಿಟಿ ಟ್ರಾನ್ಸ್‌ಫರ್‌ಗಳಿಗೆ ಮೊದಲ ಆದ್ಯತೆ ನೀಡಬೇಕೆಂದು ಸೂಚಿಸಲಾಗಿದೆ. ಆಂಬ್ಯುಲೆನ್ಸ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ತಮ್ಮ ವೈಯಕ್ತಿಕ ಮೊಬೈಲ್ ಸಂಖ್ಯೆಗಳಿಗೂ ಕರೆ ಬಂದರೆ ಸ್ವೀಕರಿಸಿ ಅಗತ್ಯ ಸೇವೆಗಳನ್ನು ಮಾಡಬೇಕೆಂದು ಸೂಚಿಸಲಾಗಿದೆ. ಮ್ಯಾನ್ಯುವಲ್ ಐಡಿಗಳನ್ನು ಕ್ರಿಯೇಟ್ ಮಾಡಿ ಆ ಮೂಲಕವೂ ಜನರಿಗೆ ತುರ್ತು ಸೇವೆ ಒದಗಿಸಲು ಸೂಚನೆ ನೀಡಲಾಗಿದೆ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ತುರ್ತು ಸೇವೆ ಒದಗಿಸುವ 112 ಸಹಾಯವಾಣಿಯಲ್ಲಿರುವ 2-3 ಸಿಬ್ಬಂದಿ ಬದಲು ಅಲ್ಲಿಗೆ 7-8 ಸಿಬ್ಬಂದಿ ನಿಯೋಜನೆ ಮಾಡಲು ಸೂಚಿಸಲಾಗಿದೆ. ಈ ಮೂಲಕ 108 ಸಹಾಯವಾಣಿಯ ತಂಡದ ಮುಖ್ಯಸ್ಥರಿಗೆ ಕರೆಗಳನ್ನು ಡೈವರ್ಟ್ ಮಾಡಿ ಆ ಮೂಲಕ ಮ್ಯಾನ್ಯುವಲ್ ಐಡಿ ಜನರೇಟ್ ಮಾಡಿ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗುತ್ತಿದೆ. ಇದರ ಜೊತೆಗೆ 104- ಸಹಾಯವಾಣಿಯನ್ನು ಕೂಡ ಬಳಸಿಕೊಂಡು 108 -ಸಹಾಯವಾಣಿ ಮೇಲಿನ ಒತ್ತಡ ಕಡಿಮೆ ಮಾಡಲಾಗುತ್ತಿದೆ. ಮಿಸ್ಡ್ ಕಾಲ್‌ಗಳನ್ನು ಕೂಡ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತಿದ್ದು, 108 ಸಹಾಯವಾಣಿಯಲ್ಲಿರುವ ಏಜೆಂಟ್‌ಗಳ ಸಂಖ್ಯೆಯನ್ನು ಕೂಡ ಹೆಚ್ಚಿಸಲು ಕ್ರಮ ವಹಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *