ರೈತರಿಂದ 25 ಕ್ವಿಂಟಾಲ್ ಮೆಕ್ಕೆಜೋಳ ಖರೀದಿ : ಬಿಸಿ ಸಂಜೀವಮೂರ್ತಿ

1 Min Read

ಸುದ್ದಿಒನ್, ಹಿರಿಯೂರು, ಡಿಸೆಂಬರ್.02 : ರೈತರಿಂದ ನೇರವಾಗಿ ಗರಿಷ್ಠ 25 ಕ್ವಿಂಟಾಲ್ ಮೆಕ್ಕೆಜೋಳವನ್ನು ಖರೀದಿಸಲು ಶಿಮೂಲ್ ಒಕ್ಕೂಟದ ಮೂಲಕ, ಹಾಲು ಉತ್ಪಾದಕರ ಸಹಕಾರ ಸಂಘಗಳ ಸಹಯೋಗದಲ್ಲಿ ಕೆಎಂಎಫ್ ಮುಂದಾಗಿದೆ ಎಂದು ಶಿಮುಲ್ ನಿರ್ದೇಶಕ ಬಿಸಿ ಸಂಜೀವಮೂರ್ತಿ ತಿಳಿಸಿದರು.

ಪತ್ರಿಕಾ ಪ್ರಕಟಣೆ ಹೇಳಿಕೆ ನೀಡಿರುವ ಅವರು ರೈತರ ಮೆಕ್ಕೆಜೋಳಕ್ಕೆ ಬೆಲೆ ಇಲ್ಲದೆ ಪರದಾಡುವ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ಖರೀದಿಗೆ ಕೆಎಂಎಫ್ ಮುಂದಾಗಿದ್ದು, ಅದರಂತೆ ರೈತರ ಮೆಕ್ಕೆಜೋಳಕ್ಕೆ ಪ್ರತಿ ಕ್ವಿಂಟಾಲ್ ಗೆ 2400 ರೂಪಾಯಿ ದರ ನಿಗದಿ ಪಡಿಸಲಾಗಿದೆ. ಹಿರಿಯೂರಿನಲ್ಲಿ ಮಂಗಳವಾರ ನಡೆದಿದ್ದ ಹಾಲು ಉತ್ಪಾದಕರ ಸಹಕಾರ ಸಂಘಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ವಿಷಯವನ್ನು ತಿಳಿಸಲಾಗಿತ್ತು. ಆದರೆ ಬುಧವಾರ ಒಂದೆರಡು ಪತ್ರಿಕೆಗಳಲ್ಲಿ ತಾಂತ್ರಿಕ ಸಮಸ್ಯೆಯಿಂದ 25 ಟನ್ ಎಂದು ತಪ್ಪಾಗಿ ಪ್ರಕಟವಾಗಿತ್ತು. ಆದರೆ ಪ್ರತಿಯೊಬ್ಬ ರೈತರಿಂದ ಗರಿಷ್ಠ 25 ಕ್ವಿಂಟಾಲ್ ಮಾತ್ರ ಮೆಕ್ಕೆಜೋಳ ಖರೀದಿಸಲಾಗುತ್ತದೆ ಎಂದು ಸ್ಪಷ್ಟನೆ ನೀಡಿದರು. ಮೆಕ್ಕೆಜೋಳದ ತೇವಾಂಶವು ಕಡ್ಡಾಯವಾಗಿ 14ಡಿಗ್ರಿ ಇರುವಂತೆ ನೋಡಿಕೊಳ್ಳಬೇಕು. ಇಲ್ಲಿ ಯಾವುದೇ ಮಧ್ಯವರ್ತಿಗಳಿಗೆ ಅವಕಾಶ ಇರುವುದಿಲ್ಲ. ಗುಬ್ಬಿ ಪಶು ಆಹಾರ ಘಟಕಕ್ಕೆ ಕಳುಹಿಸಿಕೊಡಬೇಕು. ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article