ಸುದ್ದಿಒನ್, ಚಿತ್ರದುರ್ಗ, (ಅ.26) : ಒಂದು ಕಡೆ ಶಾಲೆ ತೆರೆದ ಖುಷಿ.. 20 ತಿಂಗಳ ಬಳಿಕ ಶಾಲೆ ಆರಂಭವಾಗಿದೆ. ಆದ್ರೆ ಅಲ್ಲೊಂದು ಶಾಲೆಯಲ್ಲಿ ಆ ಖುಷಿ ಮಕ್ಕಳಲ್ಲೂ ಇಲ್ಲ.. ಶಿಕ್ಷಕರಿಗೂ ಇಲ್ಲ. ಯಾಕಂದ್ರೆ ಆ ಶಾಲೆಯಲ್ಲಿ ಹೇಳಿಕೊಳ್ಳುವಂತ ಸೌಲಭ್ಯವಿಲ್ಲ. ಶಿಥಿಲಾವಸ್ಥೆ ತಲುಪಿದ ಕಾರಣ, ಹೊರಗಡೆಯೆ ನಡೆಯುತ್ತಿದೆ ಪಾಠ-ಪ್ರವಚನ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಓಬಳಾಪುರ ಸಮೀಪದ ಸಿರಿವಾಳ ಎಂಬಲ್ಲಿ ಈ ಸರ್ಕಾರಿ ಶಾಲೆ ಇದೆ. ಶತಮಾನದಷ್ಟು ಹಳೆಯದಾದ ಶಾಲೆ ಇದೀಗ ಅವ್ಯವಸ್ಥೆಯ ಆಗರವಾಗಿದೆ. ಈ ಶಾಲೆಯಲ್ಲಿ ಸುಮಾರು 270 ಮಕ್ಕಳು ಓದುತ್ತಿದ್ದಾರೆ. ಸುತ್ತಮುತ್ತಲಿನ ಗ್ರಾಮದ ಮಕ್ಕಳೆಲ್ಲಾ ಇದೇ ಶಾಲೆಗೆ ಬರುತ್ತಾರೆ. ಆದ್ರೆ ಶಿಥಿಲಾವಸ್ಥೆ ತಲುಪಿದ್ರು ಸಹ, ಶಾಲೆಯ ದುರಸ್ತಿಗೆ ಸರ್ಕಾರ ತಲೆಕೆಡಿಸಿಕೊಂಡಂತಿಲ್ಲ.
ಶಾಲೆ ನೂರು ವರ್ಷ ದಾಟಿದೆ. ಹೀಗಾಗಿ ಕೊಠಡಿಯೆಲ್ಲಾ ಹಾಳಾಗಿವೆ. ಮೇಲ್ಛಾವಣಿಯ ಹೆಂಚುಗಳು ಸರಿಯಾಗಿ ಇಲ್ಲ. ಮಳೆ ಗಾಳಿಗೆ ಹಾರಿ ಹೋಗಿದ್ದು, ಮಳೆ ಬಂದಾಗ ಸೋರುತ್ತೆ, ಬಿಸಿಲಾದಾಗ ಸುಡುತ್ತೆ. ಕಿಟಕಿ – ಬಾಗಿಲು ಮುರಿದಿದೆ, ಗೋಡೆ ಕುಸಿದಿದೆ. ಹೀಗಾಗಿ ಬಯಲಲ್ಲೆ ಕುಳಿತು ಶಿಕ್ಷಕರು ಪಾಠ ಮಾಡುತ್ತಿದ್ದಾರೆ.
1 ರಿಂದ 8 ನೇ ತರಗತಿಯವರೆಗೆ ಈ ಶಾಲೆಯಲ್ಲು ತರಗತಿಗಳು ನಡೆಯಲಿವೆ. ಗ್ರಾಮಸ್ಥರು ಸಾಕಷ್ಟು ಬಾರಿ ಜಿಲ್ಲಾಧಿಕಾರಿಗಳಿಗೆ, ಶಿಕ್ಷಣ ಇಲಾಖೆಗೆ, ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ರು ಸಹ ಯಾವುದೇ ಪ್ರಯೋಜನವಾಗಿಲ್ಲ. ಶೌಚಾಲಯವೂ ಇಲ್ಲ.. ಮಕ್ಕಳಿಗೆ ತಕ್ಕ ಹಾಗೇ ಶಿಕ್ಷಕರು ಇಲ್ಲ. ಈ ಎಲ್ಲಾ ಸಮಸ್ಯೆಗಳನ್ನ ಕೇಳಿಸಿಕೊಂಡರು ಕೇಳದೆ ಇದ್ದಾರೆ ಸಂಬಂಧಪಟ್ಟವರು.
20 ತಿಂಗಳಿಂದ ಮಕ್ಕಳು ಶಾಲೆಯ ಮುಖವನ್ನೇ ನೋಡಿಲ್ಲ. ಶಿಕ್ಷಣ ಸರಿಯಾದ ರೀತಿಯಿಲ್ಲದೆ ಮಕ್ಕಳ ಶೈಕ್ಷಣಿಕ ವರ್ಷವೂ ಹಾಳಾಗಿದೆ. ಹೇಗೋ ಕೊರೊನಾ ಎಲ್ಲಾ ಕಳೆದು ಮಕ್ಕಳು ಮತ್ತೆ ಶಾಲೆಗೆ ಬರುವಂತಾಗಿದೆ. ಈಗಲಾದರೂ ಸಂಬಂಧಪಟ್ಟವರು ಆ ಶಾಲೆಯ ವ್ಯವಸ್ಥೆಯನ್ನ ಸರಿ ಮಾಡಿದ್ರೆ, ಒಂದಷ್ಟು ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಲಿದೆ ಅನ್ನೋದು ಗ್ರಾಮಸ್ಥರ ಅಭಿಪ್ರಾಯವಾಗಿದೆ.