ತುಮಕೂರು; ಕೃಷಿ ಹೊಂಡದಲ್ಲಿ ಸೋಡಿಯಂ ಎಸೆದು ಸ್ಪೋಟಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರೋನ್ ಪ್ರತಾಪ್ ಗೆ ನ್ಯಾಯಾಂಗ ಬಂಧನ ವಿಧಿಸಿದೆ. ಹತ್ತು ದಿನಗಳ ಕಾಲ ಅಂದ್ರೆ ಡಿಸೆಂಬರ್ 26ರವರೆಗೂ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಈ ಸಂಬಂಧ ಮಧುಗಿರಿಯ ಜೆಎಂಎಫ್ ಸಿ ನ್ಯಾಯಾಲಯ ಆದೇಶ ನೀಡಿದೆ.
ಡ್ರೋನ್ ಪ್ರತಾಪ್ ಸೋಡಿಯಂನಿಂದ ಹೊಸ ಪ್ರಯೋಗವನ್ನು ಮಾಡುವುದಕ್ಕೆ ಪ್ರಯತ್ನ ಪಟ್ಟಿದ್ದರು. ಕೃಷಿ ಹೊಂಡದಲ್ಲಿ ಸೋಡಿಯಂ ಎಸೆದು ಬ್ಲಾಸ್ಟ್ ಮಾಡಿದರು. ಇಷ್ಟಕ್ಕೆ ಸುಮ್ಮನಾಗದ ಡ್ರೋನ್ ಪ್ರತಾಪ್ ಅದನ್ನು ದೊಡ್ಡ ಸಾಧನೆಯೆಂಬಂತೆ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟರು. ಈ ವಿಡಿಯೋ ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಸಂಬಂಧ ಪೊಲೀಸರಿಗೆ ದೂರು ನೀಡಿದರು. ಮಿಡಿಗೇಶಿ ಪೊಲೀಸರು ಡ್ರೋನ್ ಪ್ರತಾಪ್ ನನ್ನು ಬಂಧಿಸಿ, ಸ್ಥಳ ಮಹಜರು ಕೂಡ ಮಾಡಿದ್ದರು. ಇಂದು ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ನೀಡಿದೆ.
ಡ್ರೋನ್ ಪ್ರತಾಪ್ ಹೀಗೆ ಸೋಡಿಯಂ ಬ್ಲಾಸ್ಟ್ ಮಾಡಿದ್ದರಿಂದ ನೀರು ಕಲುಷಿತಗೊಳ್ಳುತ್ತದೆ. ಕುಡಿಯಲು ಯೋಗ್ಯವಾಗಿರುವುದಿಲ್ಲ. ಇದರಿಂದ ಸಮಾಜಕ್ಕೆ ಕೆಟ್ಟ ಸಂದೇಶವೇ ಹೋದಂತೆ ಆಗುತ್ತದೆ. ಯಾಕಂದ್ರೆ ಈಗಂತು ಸೋಷಿಯಲ್ ಮೀಡಿಯಾ ಕ್ರೇಜ್ ದೊಡ್ಡ ಮಟ್ಟಕ್ಕೆ ಇದೆ. ಯಾರೂ ಏನೇ ಮಾಡಿದರು ಇನ್ನೊಂದಷ್ಟು ಜನ ಕ್ರೇಜ್ ಗೆ, ವೀವ್ಸ್ ಗೆ ಅದೇ ರೀತಿ ಕೆಲಸ ಮಾಡುತ್ತಾರೆ. ಡ್ರೋನ್ ಪ್ರತಾಪ್ ಏನೋ ಕೃಷಿ ಹೊಂಡದಲ್ಲಿ ಬ್ಲಾಸ್ಟ್ ಮಾಡಿದರು. ಆದರೆ ಬೇರೊಬ್ಬರು ಕೆರೆ, ಕಟ್ಟೆಗಳಲ್ಲಿ ಬ್ಲಾಸ್ಟ್ ಮಾಡಿದರೆ ಅಲ್ಲಿ ನೀರು ಕುಡಿಯುವ ಪ್ರಾಣಿಗಳ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿ ಇದು ಸಮಾಜಕ್ಕೆ ಒಳ್ಳೆಯ ಸಂದೇಶ ಅಲ್ಲ ಅನ್ನೋದು ಪರಿಸರವಾದಿಗಳ ಆಕ್ರೋಶವಾಗಿದೆ.