ಕೋರ್ ಬ್ಯಾಂಕಿಂಗ್‍ನತ್ತ 1.5 ಲಕ್ಷ ಪೋಸ್ಟಾಫೀಸುಗಳು

suddionenews
2 Min Read

ಚಿತ್ರದುರ್ಗ, (ಫೆಬ್ರವರಿ.28) : 2022ರಲ್ಲಿ 1.5 ಲಕ್ಷ ಪೋಸ್ಟ್ ಆಫೀಸ್‍ಗಳು ಸಂಪೂರ್ಣವಾಗಿ ಕೋರ್ ಬ್ಯಾಂಕಿಂಗ್ ವ್ಯವಸ್ಥೆಯಡಿಯಲ್ಲಿ ಬರಲಿವೆ.

ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಎಸ್‍ಎಂಎಸ್ ಬ್ಯಾಂಕಿಂಗ್ ಮುಖಾಂತರ ಖಾತೆಗಳ ಆನ್‍ಲೈನ್ ನಿರ್ವಹಣೆಯ ಅವಕಾಶದ ಜೊತೆಗೆ ಪೋಸ್ಟ್ ಆಫೀಸ್ ಖಾತೆ ಮತ್ತು ಬ್ಯಾಂಕ್ ಖಾತೆಗಳ ನಡುವೆ ಆನ್‍ಲೈನ್ ಹಣ ವರ್ಗಾವಣೆಯ ಅನುಕೂಲವು ಸಾಧ್ಯವಾಗಲಿದೆ.  ಈ ಒಂದು ಯೋಜನೆಯು ವಿಶೇಷವಾಗಿ ಗ್ರಾಮೀಣ ಪ್ರದೇಶದ ರೈತರು ಮತ್ತು ಹಿರಿಯ ನಾಗರಿಕರಿಗೆ ಸಹಾಯಕವಾಗಲಿದೆ ಮತ್ತು ಆರ್ಥಿಕ ಒಳಗೊಳ್ಳುವಿಕೆಯನ್ನು ಸಾಧ್ಯವಾಗಿಸುತ್ತದೆ.

ಕೇಂದ್ರ ಗ್ರಾಮೀಣ ಅಭಿವೃದ್ಧಿ ಮಂತ್ರಾಲಯ ಮಾರ್ಚ್ 23ರಂದು ಬಜೆಟ್ ಘೋಷಣೆಯ ಅನುಷ್ಠಾನದ ಕುರಿತು ಅಂಚೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳನ್ನು ಒಟ್ಟು ಗೂಡಿಸಿ ವೆಬಿನಾರ್ ಒಂದನ್ನು ಆಯೋಜಿಸಿತ್ತು. ಕರ್ನಾಟಕ ಅಂಚೆ ವಲಯದ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಸಹ ಈ ವೆಬಿನಾರ್‍ನಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ಪ್ರಸ್ತಾಪಗೊಂಡ ಮುಖ್ಯಾಂಶಗಳು ಹೀಗಿವೆ.

ಸಭೆಯನ್ನು ಪ್ರಧಾನಮಂತ್ರಿಗಳು ಉದ್ಘಾಟಿಸಿದರು. ಸರ್ಕಾರದ ಎಲ್ಲಾ ಸಂಸ್ಥೆಗಳು ಹಾಗೂ ಮದ್ಯಸ್ಥಿಕೆದಾರರು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಈ ಉದ್ದೇಶಕ್ಕಾಗಿ ಸಮನ್ವಯಗೊಳ್ಳಬೇಕಾದ ಅಗತ್ಯದ ಕುರಿತು ಹೆಚ್ಚಿನ ಒತ್ತು ನೀಡಲಾಯಿತು.

ಗ್ರಾಮೀಣ ಭಾಗದ ಡಿಜಿಟಲ್ ಆರ್ಥಿಕ ಒಳಗೊಳ್ಳುವಿಕೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯ ಕುರಿತು ಗಮನ ಹರಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಅಂಚೆ ಇಲಾಖೆಗಳು ಹೆಚ್ಚಿನ ಜಾಗೃತಿ ಮೂಡಿಸಬೇಕು.

ಹಳ್ಳಿಗಳಲ್ಲಿರುವ ಅಂಚೆ ಕಚೇರಿಯ ಶಾಖೆಗಳನ್ನೂ ಸೇರಿಸಿ ಎಲ್ಲ ಅಂಚೆ ಕಚೇರಿಗಳೂ ಕೋರ್ ಬ್ಯಾಂಕಿಂಗ್‍ನ ಅಡಿಯಲ್ಲಿ ಬರಬೇಕು. ಆನ್‍ಲೈನ್ ಹಣ ವರ್ಗಾವಣೆ ಸೇರಿದಂತೆ ಎಲ್ಲ ಸೌಲಭ್ಯಗಳು ದೇಶದ ಮೂಲೆ ಮೂಲೆಗಳಿಗೆ ತಲುಪುವಂತೆ ಮಾಡಬೇಕು.

ಸಣ್ಣ ಉಳಿತಾಯ ಪ್ರತಿನಿಧಿಗಳು, ಮಹಿಳಾ ಪ್ರಧಾನ ಕೇಂದ್ರೀಯ ಬಚತ್ ಯೋಜನಾದ ಪ್ರತಿನಿಧಿಗಳು, ಅಂಚೆ ಉಳೀತಾಯ ಖಾತೆದಾರರು, ಸ್ವ-ಸಹಾಯ ಸಂಘಗಳು ಮತ್ತು ಬ್ಯಾಂಕಿಂಗ್ ತಜ್ಞರ ಅಭಿಪ್ರಾಯಗಳನ್ನು ತೆಗೆದುಕೊಳ್ಳಲಾಯಿತು.

ಕರ್ನಾಟಕದಲ್ಲಿ ಕಳೆದ ಆರ್ಥಿಕ ವರ್ಷದಲ್ಲಿ ಸುಮಾರು 28 ಲಕ್ಷ ಫಲಾನುಭವಿಗಳಿಗೆ ಅಂಚೆ ಖಾತೆಯ ಮೂಲಕ ಸಾಮಾಜಿಕ ಭದ್ರತಾ ಪಿಂಚಣಿ ತಲುಪಿಸಲಾಗಿದೆ. ರಾಜ್ಯ ಸರ್ಕಾರದೊಟ್ಟಿಗೆ ಕೈ ಜೋಡಿಸಿ ಭಾಗ್ಯಲಕ್ಷ್ಮೀ ಯೋಜನೆಯ ಅಡಿಯಲ್ಲಿ ಅರ್ಹ ಹೆಣ್ಣುಮಕ್ಕಳ ಹೆಸರಿನಲ್ಲಿ 1.56,056 ಸುಕನ್ಯಾ ಸಮೃದ್ಧಿ ಖಾತೆ ತೆರೆಯಲಾಗಿದೆ.

ಈ ಬೃಹತ್ ಯೋಜನೆಗಳ ಮೂಲಕ ಕರ್ನಾಟಕ ಅಂಚೆ ವಲಯವು ಸಕ್ರಿಯವಾಗಿ ಆರ್ಥಿಕ ಒಳಗೊಳ್ಳುವಿಕೆಯ ಮೂಲ ಉದ್ದೇಶವನ್ನು ತಳಮಟ್ಟದವರೆಗೆ ಕೊಂಡೊಯ್ಯುವಲ್ಲಿ ಸಫಲವಾಗಿದೆ. ಮುಂಬರುವ ಕೋರ್ ಬ್ಯಾಂಕಿಂಗ್ ವ್ಯವಸ್ಥೆಯ ಅನುಷ್ಠಾನವೂ ಇದೇ ವೇಗದಲ್ಲಿ ಕರ್ನಾಟಕದಲ್ಲಿ ಸಾಧ್ಯವಾಗಲಿದೆ.

ಜನಸೇವಗೆ ಕರ್ನಾಟಕ ಅಂಚೆ ವಲಯ ಕಂಕಣಬದ್ಧವಾಗಿದೆ ಎಂದು ವಲಯದ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಎಸ್.ರಾಜೇಂದ್ರಕುಮಾರ್ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *