ಸುದ್ದಿಒನ್, ಚಿತ್ರದುರ್ಗ, (ಆ.15) : ನಗರದ ಪ್ರತಿಷ್ಠಿತ ಶ್ರೀ ಕನ್ಯಕಾಪರಮೇಶ್ವರಿ ಸೌಹಾರ್ದ ಸಹಕಾರಿ ಸಂಘ ನಿಯಮಿತವು 2022-23 ನೇ ಸಾಲಿನಲ್ಲಿ ಸಹಕಾರಿಯ ಲಾಭಾಂಶ ರೂ. 1,37,83,226.82 ಗಳಷ್ಟು ಬಂದಿದೆ ಎಂದು ಅಧ್ಯಕ್ಷರಾದ ಎಂ. ಹೆಚ್. ಪ್ರಾಣೇಶ್ ರವರು ತಿಳಿಸಿದರು.
2022-23ನೇ ಸಾಲಿನ 90 ನೇ ಸರ್ವಸದಸ್ಯರ ಸಭೆಯನ್ನು ದಿನಾಂಕ 13-08-2023ರ ಭಾನುವಾರ ನಗರದ ವಾಸವಿ ಮಹಲ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಅದ್ಯಕ್ಷರು ಮಾತನಾಡಿ, ಇದು ತುಂಬಾ ಸಂತೋಷದ ಸಂಗತಿಯಾಗಿದ್ದು, ಇದಕ್ಕೆ ಸಹಕಾರಿಯ ಸದಸ್ಯರೇ ಕಾರಣ ನಿಮ್ಮ ಸಹಕಾರ ಸದಾ ಹೀಗೆ ಇರಲಿ ಎಂದು ಎಂ. ಹೆಚ್. ಪ್ರಾಣೇಶ್ ತಿಳಿಸಿದರು.
ಉಪಾಧ್ಯಕ್ಷ ಟಿ. ಬದರಿನಾಥ್ ಅವರು 2022-23 ನೇ ಸಾಲಿನ ವಾರ್ಷಿಕ ವರದಿಯನ್ನು ಸಭೆಗೆ ತಿಳಿಸಿದರು. 2023 ರ ಮಾರ್ಚ್ ಅಂತ್ಯಕ್ಕೆ 38 ಕೋಟಿ ರೂ. ಠೇವಣಿ, ಸಾಲ ಮತ್ತು ಮುಂಗಡಗಳು ರೂ. 35ಕೋಟಿ ಇದೆ. ಸಹಕಾರಿಯ ಶೇರುದಾರರಿಗೆ ಶೇ. 20ರ ದರದಲ್ಲಿ ಲಾಭಾಂಶವನ್ನು ಪಾವತಿಸಲಾಗಿದೆ. ಈ ಬಾರಿಯೂ ಶೇ. 20 ಲಾಭಾಂಶ ವಿತರಿಸುತ್ತಿರುವುದಾಗಿ ಹೇಳಿದಾಗ ಸಭೆಯಲ್ಲಿದ್ದ ಸದಸ್ಯರು ಕರತಾಡನದ ಮೂಲಕ ಹರ್ಷ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ 2023-24ನೇ ಸಾಲಿನ ಆಯವ್ಯಯವನ್ನು ಸದಸ್ಯರ ಅನುಮೋದನೆಗಾಗಿ ಮಂಡಿಸಿದಾಗ ಉಪಸ್ಥಿತರಿದ್ದ ಸದಸ್ಯರು ಚಪ್ಪಾಳೆ ಮೂಲಕ ಅನುಮೋದನೆ ನೀಡಿದರು.
ಸಹಕಾರಿಯ ಹಿರಿಯ ಸದಸ್ಯರುಗಳಿಗೆ, ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ.ಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ನಗದು, ಪ್ರಶಸ್ತಿ ಪತ್ರ ಸೇರಿದಂತೆ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.
ಹಿಂದಿನ ಸಾಲಿನ ಮಹಾಸಭೆಯ ನಡವಳಿಕೆಗಳನ್ನು ಸಹಕಾರಿಯ ಮುಖ್ಯಕಾರ್ಯನಿರ್ವಾಹಕರು ಓದಿದರು, ಸಹಕಾರಿಯ ನಿರ್ದೇಶಕರಾದ ಕೆ.ವಿ.ಮಂಜು ಪ್ರಸಾದ್ ಸ್ವಾಗತಿಸಿದರು.
ಕಳೆದ ಸರ್ವ ಸದಸ್ಯರ ಸಭೆಯ ದಿನಾಂಕದಿಂದ ಇಲ್ಲಿಯವರೆಗೂ ದೈವಾಧೀನರಾದ ಸದಸ್ಯರಿಗೆ ಎರಡು ನಿಮಿಷ ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಮೃತ ಸದಸ್ಯರ ಹೆಸರುಗಳನ್ನು ನಿರ್ದೇಶಕಿ ಕೆ. ದೀಪ ವಾಚಿಸಿದರು. ಸಹಕಾರಿಯ ನಿರ್ದೇಶಕರಾದ ಎಲ್.ಎನ್.ರಾಜ್ ಕುಮಾರ್ ರವರು 2022-23ನೇ ಮಹಾಸಭೆಯ ನೋಟೀಸನ್ನು ವಾಚಿಸಿದರು ಮುಖ್ಯಕಾರ್ಯನಿರ್ವಾಹಕರು ಕಾರ್ಯಕ್ರಮ ನಿರೂಪಿಸಿದರು. ಸರ್ವ ಸದಸ್ಯರ ಸಭೆ ಯಶಸ್ವಿಗೆ ಶ್ರಮಿಸಿದ ಸಹಕಾರಿಯ ಎಲ್ಲಾ ಸಿಬ್ಬಂದಿ ವರ್ಗ ಸದಸ್ಯರ ಮೆಚ್ಚುಗೆಗೆ ಪಾತ್ರರಾದರು.