ಕವಾಡಿಗರಹಟ್ಟಿ ಅಭಿವೃದ್ದಿಗೆ 04 ಕೋಟಿ ರೂ. ಅನುದಾನ ಮಂಜೂರು :  ಸಚಿವ ಡಿ. ಸುಧಾಕರ್

2 Min Read

 

ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ ಆ. 15 : ಕವಾಡಿಗರಹಟ್ಟಿಯಲ್ಲಿ ಇತ್ತೀಚೆಗೆ ಜರುಗಿದ ಅಹಿತಕರ ಘಟನೆ ಬಳಿಕ, ಇಲ್ಲಿನ ಸಮಸ್ಯೆಗಳನ್ನು ನಿವಾರಿಸಲು ಕವಾಡಿಗರ ಹಟ್ಟಿಯಲ್ಲಿ ಮೂಲಭೂತ ಸೌಕರ್ಯಗಳಿಗಾಗಿ ಸರ್ಕಾರ 04 ಕೋಟಿ ರೂ. ಅನುದಾನ ಮಂಜೂರು ಮಾಡಿದೆ ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್ ಅವರು ಹೇಳಿದರು.

ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಕವಾಡಿಗರ ಹಟ್ಟಿಯಲ್ಲಿ ಇತ್ತೀಚೆಗೆ ಕಲುಷಿತ ನೀರಿನಿಂದ ಸಂಭವಿಸಿದ ಅಹಿತಕರ ಘಟನೆ ಸಂಬಂಧ, ಇಲ್ಲಿನ ಸಮಸ್ಯೆಗಳ ನಿವಾರಣೆಗೆ ಹಾಗೂ ಮೂಲಭೂತ ಸೌಕರ್ಯಗಳಾದ ಒಳಚರಂಡಿ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ಘಟಕ, 2.5 ಲಕ್ಷ ಲೀ. ಸಾಮಥ್ರ್ಯದ ಓವರ್ ಹೆಡ್ ಟ್ಯಾಂಕ್, ಹೊಸದಾಗಿ ನಳದ ಸಂಪರ್ಕ ಮುಂತಾದ ಅಭಿವೃದ್ಧಿ ಕಾರ್ಯಗಳಿಗಾಗಿ ಸರ್ಕಾರದ ನಗರಾಭಿವೃದ್ಧಿ ಇಲಾಖೆಯು 04 ಕೋಟಿ ರೂ. ಮಂಜೂರು ಮಾಡಿದ್ದು, ಶೀಘ್ರದಲ್ಲೇ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು.  ಅಲ್ಲದೆ ಇಲ್ಲಿ ಪರಿಶಿಷ್ಟರೇ ಹೆಚ್ಚು ವಾಸವಿರುವುದರಿಂದ, ವಸತಿ ರಹಿತರಿಗೆ ಹೊಸದಾಗಿ ಮನೆ ಮಂಜೂರು ಮಾಡಲು ಸಹ ಸಮಾಜ ಕಲ್ಯಾಣ ಇಲಾಖೆ ಮುಂದಾಗಿದೆ, ಈ ಕುರಿತು ಸಮಾಜ ಕಲ್ಯಾಣ ಸಚಿವರೊಂದಿಗೆ ಚರ್ಚಿಸಲಾಗಿದೆ. ಸಾಮೂಹಿಕ ಶೌಚಾಲಯ ಹಾಗೂ ವೈಯಕ್ತಿಕ ಶೌಚಾಲಯಗಳನ್ನು ಕೂಡ ನಿರ್ಮಿಸಲು ಕ್ರಮ ವಹಿಸಲಾಗುವುದು ಎಂದರು.

ಮನೆಯ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು 2000 ರೂ. ಆರ್ಥಿಕ ಪ್ರೋತ್ಸಾಹ ನೀಡುವ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ “ಗೃಹಲಕ್ಷ್ಮೀ” ಯೋಜನೆಗೆ ಇದೇ ಆ. 27 ರಂದು ಚಾಲನೆ ನೀಡಲಾಗುವುದು.  ರಾಜ್ಯ ಮಟ್ಟದಲ್ಲಿ ಬೆಳಗಾವಿಯಲ್ಲಿ ಮುಖ್ಯಮಂತ್ರಿಗಳು ಚಾಲನೆ ನೀಡಿದರೆ, ಉಳಿದಂತೆ ಎಲ್ಲ ಜಿಲ್ಲಾ, ತಾಲ್ಲೂಕು, ಗ್ರಾಮ ಮಟ್ಟದಲ್ಲಿಯೂ ಯೋಜನೆಯನ್ನು ಜಾರಿಗೊಳಿಸುವ ಕಾರ್ಯಕ್ರಮಗಳನ್ನು ಹಮ್ಮಕೊಳ್ಳಲಾಗುವುದು.

ಜಿಲ್ಲೆಯಲ್ಲಿ ಒಟ್ಟು 3,47,620 ಫಲಾನುಭವಿಗಳು ಅಂದರೆ ಶೇ. 87 ರಷ್ಟು ನೊಂದಣಿ ಮಾಡಿಸಿಕೊಂಡಿದ್ದು, ಇಡೀ ರಾಜ್ಯದಲ್ಲಿಯೇ ನಮ್ಮ ಜಿಲ್ಲೆ ಎರಡನೆ ಸ್ಥಾನದಲ್ಲಿದೆ.  ಅಂದು ಯೋಜನೆಯ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯ ಮಂಜೂರಾಗಲಿದ್ದು, ಈ ಕುರಿತು ಫಲಾನುಭವಿಗಳ ಮೊಬೈಲ್‍ಗೆ ಸಂದೇಶ ರವಾನೆಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಹೇಳಿದರು.

ಚಿತ್ರದುರ್ಗ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ, ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ., ಜಿಲ್ಲಾ ಪಂಚಾಯತ್ ಸಿಇಒ ಸೋಮಶೇಖರ್, ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ. ಪರಶುರಾಮ್, ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಸೇರಿದಂತೆ ವಿವಿಧ ಅಧಿಕಾರಿಗಳು, ಗಣ್ಯರು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *