ಸುದ್ದಿಒನ್, ಚಿತ್ರದುರ್ಗ, (ಜು.16): ಚಿತ್ರದುರ್ಗ-ದಾವಣಗೆರೆ ಅವಳಿ ಜಿಲ್ಲೆಯ ಹಿರಿಯ ಪತ್ರಕರ್ತ ಚಂದ್ರವಳ್ಳಿ ತಿಪ್ಪೇರುದ್ರಸ್ವಾಮಿ (85) ಭಾನುವಾರ ನಿಧನ ಹೊಂದಿದರು.
ಮೃತರಿಗೆ ಇಬ್ಬರು ಪುತ್ರಿಯರು ಇದ್ದಾರೆ. ಸೋಮವಾರ ಬೆಳಗ್ಗೆ ನಗರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ ನಾಲ್ಕು ದಶಕದ ಹಿಂದೆಯೇ ಚಂದ್ರವಳ್ಳಿ ಪತ್ರಿಕೆ ಹೊರತರುವ ಮೂಲಕ ಅವಳಿ ಜಿಲ್ಲೆಯ ಮಾಧ್ಯಮ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದ ತಿಪ್ಪೇರುದ್ರಸ್ವಾಮಿ, ನೂರಾರು ಯುವ ಪತ್ರಕರ್ತರ ಉತ್ಸಾಹಕ್ಕೆ ಚಿಲುಮೆ ರೀತಿ ಕಾರ್ಯನಿರ್ವಹಿಸಿದ್ದರು.
ಮಾಧ್ಯಮ ಅಕಾಡೆಮಿ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ, ಮುರುಘಾಮಠ, ಕಬೀರಾನಂದ ಮಠ, ಮಾದಾರ ಚನ್ನಯ್ಯ ಗುರುಪೀಠ, ಬಾಳೇಹೊನ್ನೂರು ಮಠ ಸೇರಿದಂತೆ ವಿವಿಧ ಮಠ, ಸಂಘ-ಸಂಸ್ಥೆಗಳ ಪ್ರಶಸ್ತಿ, ಗೌರವ, ಸನ್ಮಾನಕ್ಕೆ ಪುರಸ್ಕೃತರಾಗಿದ್ದ ತಿಪ್ಪೇರುದ್ರಸ್ವಾಮಿ, ಇಳಿ ವಯಸ್ಸಿನಲ್ಲೂ ಕೃತಿಗಳನ್ನು ರಚಿಸಿ, ಬಿಡುಗಡೆ ಮಾಡುವ ಮೂಲಕ ಯುವ ಬರಹಗಾರರಿಗೆ ಸ್ಫೂರ್ತಿಯಾಗಿದ್ದರು.
ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಪರಿಣಿತರಾಗಿದ್ದ ತಿಪ್ಪೇರುದ್ರಸ್ವಾಮಿ, ಹಲವು ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ಮೂಲಕ ಮಧ್ಯಕರ್ನಾಟಕದಲ್ಲಿ ಜನಾನುರಾಗಿದ್ದರು.
ಜಿಲ್ಲಾ, ರಾಜ್ಯ ಪತ್ರಕರ್ತರ ಸಂಘದ ಮೂಲಕ ಚಿತ್ರದುರ್ಗ ಜಿಲ್ಲೆಯಲ್ಲಿ ರಾಜ್ಯ ಪತ್ರಕರ್ತರ ಸಮ್ಮೇಳನ ಆಯೋಜಿಸಿ, ಮಾದರಿ ರೀತಿ ಯಶಸ್ವಿ ಸಮ್ಮೇಳನದ ರುವಾರಿಯಲ್ಲಿ ಪ್ರಮುಖರಾಗಿದ್ದರು.
ಜಿಲ್ಲಾಡಳಿತ ಕೊಡಮಾಡುವ ರಾಜ್ಯೋತ್ಸವ ಪ್ರಶಸ್ತಿ ಸೇರಿ ಅನೇಕ ಪ್ರಶಸ್ತಿಗಳ ಪುರಸ್ಕೃತರಾಗಿದ್ದ ತಿಪ್ಪೇರುದ್ರಸ್ವಾಮಿ, ವಿವಿಧ ಕಾರ್ಯಕ್ರಮಗಳಲ್ಲಿ ಆಯುರ್ವೇದ ಮತ್ತು ಮಾಧ್ಯಮ ಕ್ಷೇತ್ರದ ಕುರಿತು ಉಪನ್ಯಾಸ ನೀಡುವ ಮೂಲಕ ಸಮಾಜವನ್ನು ಜಾಗೃತಗೊಳಿಸುವ ಕೆಲಸ ನಿರ್ವಹಿಸುತ್ತಿದ್ದರು.
ಸಂಘ ಪರಿವಾರದೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ತಿಪ್ಪೇರುದ್ರಸ್ವಾಮಿ ಅವರ ಏಕೈಕ ಪುತ್ರ, ಪತ್ರಕರ್ತ ಪ್ರತಾಪ್ ರುದ್ರದೇವ ಎರಡು ತಿಂಗಳ ಹಿಂದೆ ನಿಧನ ಹೊಂದಿದ್ದರು. ಪುತ್ರನ ಸಾವಿನ ಬಳಿಕ ಜರ್ಝಿರಿತರಾಗಿದ್ದ ಹಿರಿಯ ಜೀವ ಸೋಮವಾರ ಇಹಲೋಕ ತ್ಯಜಿಸಿದರು.
ಅಂತಿಮ ದರ್ಶನ: ವಿಷಯ ತಿಳಿಯುತ್ತಿದ್ದಂತೆ ಕೆಳಗೊಟೆ ಸರಸ್ವತಿ ಲಾ ಕಾಲೇಜ್ ಸಮೀಪದ ಮೃತರ ನಿವಾಸಕ್ಕೆ ಪತ್ರಕರ್ತರು, ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳ ಮುಖಂಡರು, ಮಠಾಧೀಶರು ಭೇಟಿ ನೀಡಿ ಅಂತಿಮ ದರ್ಶನ ಪಡೆದು, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ಇಬ್ಬರು ಪುತ್ರಿಯರು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಹಾಗೂ ಸಹೋದರ ಖ್ಯಾತ ಆಯುರ್ವೇದ ವೈದ್ಯ ಡಾ.ಬಿ.ಟಿ. ರುದ್ರೇಶ್ ಸೇರಿದಂತೆ ಅನೇಕ ಬಂಧು-ಮಿತ್ರರನ್ನು ಅಗಲಿದ್ದಾರೆ.
ಸೋಮವಾರ ಅಂತ್ಯಕ್ರಿಯೆ: ನಗರದ ಜೋಗಿಮಟ್ಟಿ ರಸ್ತೆಯ ವೀರಶೈವ ರುದ್ರಭೂಮಿಯಲ್ಲಿ ಸೋಮವಾರ ಮಧ್ಯಾಹ್ನ ಸುಮಾರು 2 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ. ಅಲ್ಲಿಯವರೆಗೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಪ್ರೊ.ಬಿ.ಕೆ.ರವಿ ತೀವ್ರ ಸಂತಾಪ:
ಚಿತ್ರದುರ್ಗ ಜಿಲ್ಲೆಯಲ್ಲಿ ಚಂದ್ರವಳ್ಳಿ ಎಂಬ ಪತ್ರಿಕೆ ಮೂಲಕ ರಾಜ್ಯದ ಗಮನಸೆಳೆಯುವ ರೀತಿ ಕರ್ತವ್ಯನಿರ್ವಹಿಸಿದ ತಿಪ್ಪೇರುದ್ರಸ್ವಾಮಿ ಅವರು ಸರಳ-ಸಜ್ಜನಿಕೆ ವ್ಯಕ್ತಿ ಆಗಿದ್ದರು.
ಆಡುಮುಟ್ಟದ ಸೊಪ್ಪಿಲ್ಲ; ತಿಪ್ಪೇರುದ್ರಸ್ವಾಮಿ ಮಾಡದ ವರದಿ ಇಲ್ಲವೆಂಬಂತೆ ಸರಣಿ ವರದಿಗಳನ್ನು ಬರೆದು ಸಮಾಜವನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದರು. ತಮಗಮ ಇಳಿ ವಯಸ್ಸನ್ನು ಲೆಕ್ಕಿಸದೆ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಅವರ ಜೀವನ ಉತ್ಸಾಹ ನನ್ನಂತವರಲ್ಲಿ ಅಚ್ಚರಿ ಮೂಡಿಸುತ್ತಿತ್ತು.
ಇತ್ತೀಚೆಗೆ ತಾವು ಬರೆದ ಕೃತಿ ಬಿಡುಗಡೆಗಾಗಿ ಸಮಾರಂಭ ಆಯೋಜಿಸಿ ನನ್ನ ಕೈಯಿಂದ ಬಿಡುಗಡೆಗೊಳಿಸಿದ ಸಂದರ್ಭ ಹಚ್ಚಹಸಿರು ಆಗಿರುವಾಗಲೇ ಅವರ ಸಾವು ಅತ್ಯಂತ ದುಃಖ ತರಿಸಿದೆ. ಅವರ ಆತ್ಮಕ್ಕೆ ಶಾಂತಿ ಲಭಿಸಲಿ, ನೊಂದ ಕುಟುಂಬ, ಸ್ನೇಹಿತರು, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ ಎಂದು ಕೊಪ್ಪಳ ವಿಶ್ವವಿದ್ಯಾಲಯ ಕುಲಪತಿ ಡಾ.ಬಿ.ಕೆ.ರವಿ ಸಂತಾಪ ವ್ಯಕ್ತಪಡಿಸಿದ್ದಾರೆ.