ಚಾಮರಾಜನಗರ: ರಾಜ್ಯದ ಪ್ರವಾಸಿ ತಾಣಗಳಲ್ಲಿ ಜಿಲ್ಲೆಯ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಕೂಡ ಒಂದು. ವಾರಾಂತ್ಯದಲ್ಲಿ ಟ್ರಿಪ್ ಎಂದು ಫ್ಲ್ಯಾನ್ ಮಾಡಿದರೆ ಅದು ಹಿಮವದ್ ಗೋಪಾಲಸ್ವಾಮಿ ಬೆಟ್ಟ ಕೂಡ ಆಗಿರುತ್ತದೆ. ಅಷ್ಟು ಸುಂದರವಾದ ಜಾಗ. ಪ್ರಾಣಿಪ್ರಿಯರಿಗೂ ಹೇಳಿ ಮಾಡಿಸಿದ ಜಾಗ ಎಂದರೆ ತಪ್ಪಾಗುವುದಿಲ್ಲ. ಯಾಕೆಂದರೆ ರಸ್ತೆ ರಸ್ತೆಯಲ್ಲೂ ಪ್ರಾಣಿಗಳ ಓಡಾಟ ಕಾಣ ಸಿಗುತ್ತದೆ. ಇದೀಗ ಪ್ರಾಣಿಗಳ ಮುಕ್ತ ಸಂಚಾರಕ್ಕಾಗಿ ಖಾಸಗಿ ವಾಹನಗಳ ನಿಷೇಧ ಮಾಡಲಾಗಿದೆ.
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ದೇಶದ ನಾನಾ ರಾಜ್ಯಗಳಿಂದಲೂ ಬರುತ್ತಾರೆ. ತಮ್ಮದೇ ವಾಹನಗಳಲ್ಲಿ ಬೆಟ್ಟದ ಮೇಲೆ ಬರುತ್ತಾರೆ. ಆಗ ಮಾರ್ಗಮಧ್ಯೆ ಸಿಕ್ಕ ಪ್ರಾಣಿಗಳನ್ನು ಗದರಿಸಿ, ಅವುಗಳಿಗೆ ಭಯಪಡಿಸುತ್ತಾರೆ. ಇದರಿಂದ ಪ್ರಾಣಿಗಳಿಗೆ ಹಿಂಸೆಯಾಗಿದೆ. ಇದನ್ನು ಗಮನಿಸಿದ್ದ ಅಲ್ಲಿನ ಅರಣ್ಯ ಇಲಾಖೆ ಮಹತ್ವದ ತೀರ್ಮಾನ ತೆಗೆದುಕೊಂಡಿದೆ.
ಬೆಟ್ಟದ ಕೆಳಗೆಯೇ ತಮ್ಮ ವಾಹನಗಳನ್ನು ಬಿಟ್ಟು, ಸರ್ಕಾರಿ ಬಸ್ ನಲ್ಲಿ ಪ್ರಯಾಣಿಸಬೇಕಿದೆ. ಈಗ ಕಾಡಿನ ತುಂಬೆಲ್ಲಾ ಹೊಗೆ ತುಂಬಿಕೊಳ್ಳುವುದು ಕಡಿಮೆಯಾಗಿದೆ. ಹಾಗೇ ಹುಲಿ ಸೇರಿದಂತೆ ಇತರೆ ಪ್ರಾಣಿಗಳು ಮುಕ್ಯವಾಗಿ ಓಡಾಡುತ್ತಿವೆ. ಇದನ್ನು ಕಂಡ ಪ್ರವಾಸಿಗರು ಕೂಡ ಖುಷಿಯಲ್ಲಿದ್ದಾರೆ.