ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಿಬಿಐ, ಇಡಿ ವಿಚಾರದಲ್ಲಿ ಪ್ರಧಾನಿ ಮೋದಿ ಪರ ಬ್ಯಾಟ್ ಬೀಸಿದ್ದಾರೆ. ರಾಜ್ಯದಲ್ಲಿ ಕೇಂದ್ರೀಯ ಸಂಸ್ಥೆಗಳ ಆಪಾದನೆ ಮಿತಿಮೀರಿದೆ. ಸಿಬಿಐ, ಇಡಿ ಹಿಂದೆ ಪ್ರಧಾನಿ ನರೇಂದ್ರ ಮೋದಿಯ ಕೈವಾಡವಿದೆ ಎಂದು ನಾನು ನಂಬುವುದಿಲ್ಲ ಎಂದು ಹೇಳಿದ್ದಾರೆ.

ಕೇಂದ್ರೀಯ ತನಿಖಾ ಸಂಸ್ಥೆಗಳ ಸಂಬಂಧ ವಿಧಾನಸಭೆಯಲ್ಲಿ ಮಾತನಾಡುತ್ತಿದ್ದ ಬ್ಯಾನರ್ಜಿ, ಕೇಂದ್ರ ಸರ್ಕಾರದ ಅಜೆಂಡಾ ಮತ್ತು ಅವರ ಪಕ್ಷದ ಹಿತಾಸಕ್ತಿಗಳು ಮಿಕ್ಸ್ ಆಗದಂತೆ ನೋಡಿಕೊಳ್ಳಬೇಕು. ಈಗಿನ ಕೇಂದ್ರ ಸರ್ಕಾರವು ಸರ್ವಾಧಿಕಾರದ ರೀತಿಯಲ್ಲಿ ವರ್ತಿಸುತ್ತಿದೆ. ಈ ನಿರ್ಣಯವು ನಿರ್ದಿಷ್ಟವಾಗಿ ಯಾರ ವಿರುದ್ಧವೂ ಅಲ್ಲ, ಆದರೆ ಕೇಂದ್ರೀಯ ಸಂಸ್ಥೆಗಳ ಪಕ್ಷಪಾತದ ಕಾರ್ಯನಿರ್ವಹಣೆಯ ವಿರುದ್ಧವಾಗಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಸಿಬಿಐ ಮತ್ತು ಇಡಿ ವಿರುದ್ಧದ ಇಂತಹ ನಿರ್ಣಯವು ವಿಧಾನಸಭೆಯ ನಿಯಮಗಳು ಮತ್ತು ನಿಬಂಧನೆಗಳಿಗೆ ವಿರುದ್ಧವಾಗಿದೆ ಎಂದು ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಹೇಳಿದ್ದಾರೆ. ಕೇಂದ್ರೀಯ ಸಂಸ್ಥೆಗಳಾದ ಸಿಬಿಐ ಮತ್ತು ಇಡಿ ರಾಜ್ಯದಲ್ಲಿನ ಹಲವು ಪ್ರಕರಣಗಳ ತನಿಖೆ ನಡೆಸುತ್ತಿದ್ದು, ಇದರಲ್ಲಿ ಹಿರಿಯ ಟಿಎಂಸಿ ನಾಯಕರು ಆರೋಪಿಗಳಾಗಿದ್ದಾರೆ.

