ಬೆಂಗಳೂರು: ಅಥಣಿ ಕ್ಷೇತ್ರದ ಟಿಕೆಟ್ ಸಿಗದ ಕಾರಣಕ್ಕೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ರಾಜೀನಾಮೆ ನೀಡಲು ನಿರ್ಧಾರ ಮಾಡಿದ್ದಾರೆ. ಸದ್ಯ ರಾಜೀನಾಮೆ ಪತ್ರ ತಲುಪಿಸಲು ಬೆಂಗಳೂರಿಗೆ ಬಂದು ಇಳಿದಿದ್ದಾರೆ. ಸವದಿ ಅವರ ಹಿಂದೆ ಡಿಕೆ ಶಿವಕುಮಾರ್ ಅವರಿದ್ದಾರೆ ಎನ್ನಲಾಗಿದೆ.
ಸದ್ಯ ಸವದಿ ಅವರು ಸಾಂಬ್ರಾದಿಂದ ಬೆಂಗಳೂರಿಗೆ ಬಂದಿಳಿದಿದ್ದಾರೆ. ಸವದಿಯನ್ನು ಬೆಂಗಳೂರಿಗೆ ಕರೆತರಲು ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಜವಾಬ್ದಾರಿ ನೀಡಲಾಗಿತ್ತು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ನೀಡಿದ ಜವಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಈಗಾಗಲೇ ಸವದಿ ಅವರು ಬೆಂಗಳೂರಿಗೆ ಬಂದಿದ್ದಾರೆ. ಸಿಡಿದೆದ್ದಿರುವ ಲಕ್ಷ್ಮಣ ಸವದಿ ಅವರನ್ನು ಸಮಾಧಾನ ಪಡಿಸಲು ಬಿಜೆಪಿ ಕೂಡ ಪ್ರಯತ್ನ ಮಾಡಿದೆ. ಆದರೆ ಬಿಜೆಪಿ ನಾಯಕರಿಗೆ ಸಿಗದಂತೆ ಕಾಯಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಲಕ್ಷ್ಮಣ ಸವದಿ ಅವರಿಗೆ ವಿಶೇಷ ವಿಮಾನ ಬುಕ್ ಮಾಡಿದ್ದು ಡಿಕೆ ಶಿವಕುಮಾರ್ ಎನ್ನಲಾಗಿದೆ. ಸವದಿ ಜೊತೆಗೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಸಹೋದರ ಚನ್ಬರಾಜ ಹಟ್ಟಿಹೊಳಿ ಕೂಡ ಕಾಣಿಸಿಕೊಂಡಿದ್ದಾರೆ. ಸದ್ಯ ಸವದಿ ಬೆಂಗಳೂರಿನ ಅವರ ನಿವಾಸ ತಲುಪಿದ್ದಾರೆ.