ಚಿತ್ರದುರ್ಗ,(ಜುಲೈ. 08) : ಇತ್ತೀಚೆಗೆ ಸುರಿದ ಮಳೆಗೆ ತೀವ್ರ ಹಾನಿಗೊಳಗೊಂಡು ಶಿಥಿಲವಾದ ಶಾಲಾ ಕೊಠಡಿಗಳ ದುರಸ್ತಿಯನ್ನು ರೂ.2 ಕೋಟಿ ವೆಚ್ಚದಲ್ಲಿ ಮಾಡಲಾಗುವುದು ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವರು ಹಾಗೂ ಲೋಕಸಭಾ ಸದಸ್ಯರಾದ ಎ.ನಾರಾಯಣಸ್ವಾಮಿ ಭರವಸೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರೂ.1 ಕೋಟಿ ಸಂಸದರ ಅನುದಾನ ಹಾಗೂ ರೂ.1 ಕೋಟಿ ಜಿಲ್ಲಾ ಪಂಚಾಯಿತಿ ಅನುದಾನದಡಿಯಲ್ಲಿ ಶಾಲಾ ಕೊಠಡಿಗಳ ದುರಸ್ತಿ ಕಾರ್ಯ ಮಾಡಲಾಗುವುದು. ಶಿಥಿಲಗೊಂಡ ಜಿಲ್ಲೆಯ ಎಲ್ಲಾ ಶಾಲೆಗಳ ದುರಸ್ತಿ ಕಾರ್ಯವನ್ನು 6 ತಿಂಗಳೊಳಗಾಗಿ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು.
ದೇವಸ್ಥಾನಕ್ಕಿಂತ ಶಾಲೆ ನಿರ್ಮಾಣ ಬಹಳ ಮುಖ್ಯ, ಶಿಥಿಲಗೊಂಡ ಎಲ್ಲಾ ಶಾಲೆಗಳನ್ನು ಕೈಗೆತ್ತಿಕೊಂಡು ಕ್ರಿಯಾ ಯೋಜನೆ ತಯಾರಿಸಿ, ತ್ವರಿತಗತಿಯಲ್ಲಿ ನಿರ್ಮಾಣ ಮಾಡಬೇಕು. ಶಿಥಿಲಗೊಂಡ ಶಾಲೆಗಳ ಪಟ್ಟಿಯನ್ನು ನಿರ್ಮಾಣ ಏಜೆನ್ಸಿಗಳಿಗೆ ನೀಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡಿದ ಅವರು, ಹಿರಿಯೂರು ಮತ್ತು ಚಳ್ಳಕೆರೆ ತಾಲ್ಲೂಕಿನ ಶಿಥಿಲಗೊಂಡ ಶಾಲೆಗಳ ದುರಸ್ತಿ ಕಾರ್ಯದ ಜವಾಬ್ದಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಯಿತು. ಹೊಳಲ್ಕೆರೆ ತಾಲ್ಲೂಕಿನ ಶಾಲೆಗಳನ್ನು ಲೋಕೋಪಯೋಗಿ ಇಲಾಖೆಗೆ ಹಾಗೂ ಮೊಳಕಾಲ್ಮುರು, ಹೊಸದುರ್ಗ ಹಾಗೂ ಚಿತ್ರದುರ್ಗ ತಾಲ್ಲೂಕಿನ ಶಿಥಿಲಗೊಂಡ ಶಾಲೆಗಳ ದುರಸ್ತಿ ಕಾರ್ಯ ಮಾಡುವಂತೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗಕ್ಕೆ ಸೂಚನೆ ನೀಡಲಾಯಿತು. ಶಾಲೆಗಳನ್ನು ದುರಸ್ತಿ ಮಾಡಿದ ನಂತರ ಸವಿವರದೊಂದಿಗೆ ಸಂಪೂರ್ಣವಾದ ವರದಿ ನೀಡುವಂತೆ ನಿರ್ಮಾಣ ಏಜೆನ್ಸಿಗಳಿಗೆ ತಾಕೀತು ಮಾಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್‍ಕೆಬಿ ಪ್ರಸಾದ್ ಮಾತನಾಡಿ, ಜಿಲ್ಲೆಯ 313 ಶಾಲೆಗಳ ಪೈಕಿ ಶಿಥಿಲಗೊಂಡು, ಹನಿಗೊಳಗಾಗಿ ದುರಸ್ತಿಗೊಳಿಸಬೇಕಾದ 626 ಕೊಠಡಿಗಳಿದ್ದು, ಈ ಎಲ್ಲ ಶಾಲಾ ಕೊಠಡಿಗಳನ್ನು ದುರಸ್ತಿ ಮಾಡುವುದು ತುರ್ತು ಅವಶ್ಯಕವಾಗಿದೆ. ಒಂದು ಕೊಠಡಿಗೆ ರೂ.50 ಲಕ್ಷ ಅನುದಾನದ ಅವಶ್ಯಕತೆ ಇದೆ ಎಂದು ಮಾಹಿತಿ ನೀಡಿದರು.
ಆಸ್ಪತ್ರೆ ಮೇಲ್ದರ್ಜೆಗೆ ಪ್ರಸ್ತಾವ ಸಲ್ಲಿಕೆ: ಜಿಲ್ಲೆಯ ತುರುವನೂರು ಹಾಗೂ ಜವನಗೊಂಡನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅನುಮೋದನೆಗೆ ಬಾಕಿ ಇದೆ ಎಂದು ಆರ್‍ಸಿಹೆಚ್ ಅಧಿಕಾರಿ ಡಾ.ಕುಮಾರಸ್ವಾಮಿ ಹೇಳಿದರು.
ಅಮೃತ ಆರೋಗ್ಯ ಯೋಜನೆಯಡಿ ಈಗಾಗಲೇ ಹೊರಕೇದೇವರಪುರ, ಬಿ.ಜಿ.ಕೆರೆ ಹಾಗೂ ದೊಡ್ಡ ಉಳ್ಳಾರ್ತಿ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ಕ್ರಮವಹಿಸಲಾಗಿದೆ ಎಂದರು.
ಜೂನ್ ಮಾಹೆಯಲ್ಲಿ 14 ಕೋವಿಡ್ ಪ್ರಕರಣ ದಾಖಲಾಗಿವೆ. ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆ ಇದೆ. ಹೆರಿಗೆಗೆ ಸಂಬಂಧಿಸಿದಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ.75ರಷ್ಟು ಹಾಗೂ ಶೇ.25ರಷ್ಟು ಖಾಸಗಿ ಆಸ್ಪತ್ರೆಗಳಲ್ಲಿ ಹೆರಿಗೆಗಳಾಗುತ್ತಿವೆ. ಆರ್‍ಸಿಹೆಚ್ ಪೋರ್ಟಲ್‍ನಲ್ಲಿ ಎಲ್ಲ ತಾಯಂದಿರನ್ನು ನೋಂದಣಿ ಮಾಡಲಾಗುತ್ತಿದೆ. ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಪ್ರತಿ ಮಾಹೆ 650 ರಿಂದ 700 ಹೆರಿಗೆಗಳಾಗುತ್ತಿವೆ ಎಂದು ಸಭೆಗೆ ಮಾಹಿತಿ ನೀಡಿದರು.
ಕೆಎಂಇಆರ್‍ಸಿ ನಿಧಿಗೆ ಸಂಬಂಧಿಸಿದಂತೆ ಚಿತ್ರದುರ್ಗ ಜಿಲ್ಲೆಗೆ 3792 ಕೋಟಿ ಅನುದಾನ ಮೀಸಲಿದೆ. ಬಳ್ಳಾರಿ ಜಿಲ್ಲೆಯ ವೈದ್ಯಕೀಯ ಕಾಲೇಜಿಗೆ ಈ ನಿಧಿ ಬಳಸಿಕೊಳ್ಳಲಾಗಿದೆ. ಅದರಂತೆ ಚಿತ್ರದುರ್ಗ ವೈದ್ಯಕೀಯ ಕಾಲೇಜಿಗೆ ಅನುದಾನ ಕೊಡಲು ಅವಕಾಶ ಇದೆಯೇ ಎಂಬ ಸಚಿವರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕ ರಾಮ್‍ಜಿ ನಾಯಕ್, ಬಳ್ಳಾರಿ ಜಿಲ್ಲೆಯಲ್ಲಿ 2017-18ನೇ ಸಾಲಿನಲ್ಲಿ ಪ್ರಸ್ತಾವ ಸಲ್ಲಿಸಿ, ಅನುಮೋದನೆ ಪಡೆದ್ದು, ಅನುದಾನ ಬಳಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಅಡುಗೆ ಅನಿಲ ಸಿಲಿಂಡರ್ ರಹಿತ ಕುಟುಂಬಗಳ ಸರ್ವೆ ಮಾಡಿಸಿ ಉಜ್ವಲ ಯೋಜನೆಯಡಿ ಸೇರಿಸಿ- ಜಿಲ್ಲೆಯಲ್ಲಿ ಅಡುಗೆ ಅನಿಲ ಸಿಲಿಂಡರ್ ಬಳಸದೇ ಇರುವಂತಹ ಕುಟುಂಬಗಳ ಸರ್ವೆ ಮಾಡಿಸಿ, ಅಂತಹ ಕುಟುಂಬಗಳಿಗೆ ಕೇಂದ್ರ ಸರ್ಕಾರದ ಉಜ್ವಲ ಯೋಜನೆಯಡಿ ಸೇರಿಸಿ, ಅವರನ್ನು ಯೋಜನೆಯ ಫಲಾನುಭವಿಗಳನ್ನಾಗಿಸುವಂತೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಖಾತೆ ಸಚಿವರು ಹಾಗೂ ಸಂಸದರಾದ ಎ. ನಾರಾಯಣಸ್ವಾಮಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಪ್ರಸ್ತುತ 1.47 ಲಕ್ಷ ಕುಟುಂಬಗಳಿಗೆ ಉಜ್ವಲ ಯೋಜನೆಯಡಿ ಅಡುಗೆ ಅನಿಲ ಸಿಲಿಂಡರ್ ವಿತರಿಸಲಾಗಿದೆ. ಈ ಯೋಜನೆಗೆ ಸರ್ಕಾರ ಫಲಾನುಭವಿಗಳ ಸಂಖ್ಯೆಗೆ ಯಾವುದೇ ಮಿತಿ ನಿಗದಿಪಡಿಸಿಲ್ಲ. ಹೀಗಾಗಿ ಅಲ್ಲದೆ ಈ ಯೋಜನೆಯಡಿ ಸೌಲಭ್ಯ ಕೋರಿ ಅರ್ಜಿ ಸಲ್ಲಿಸುವ ಎಲ್ಲ ಅರ್ಹ ಫಲಾನುಭವಿಗಳಿಗೂ ಕೂಡ ಉಜ್ವಲ ಯೋಜನೆಯಡಿ ಸಿಲಿಂಡರ್ ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಜಿಲ್ಲೆಯಲ್ಲಿ ಉಚಿತ ಆಹಾರಧಾನ್ಯ ನೀಡಲಾಗುತ್ತಿದ್ದು, ಕಳೆದ ವರ್ಷ 19 ಸಾವಿರ ಅರ್ಜಿ ವಿಲೇವಾರಿ ಮಾಡಲಾಗಿದೆ, ಇನ್ನೂ 4900 ಅರ್ಜಿಗಳು ಬಾಕಿ ಇವೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಿರಂತರವಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿನಿರ್ದೇಶಕ ಮಧುಸೂಧನ್ ಅವರು ಸಭೆಗೆ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಯೋಜನೆಯ ಬಗ್ಗೆ ಅರಿವು ಇರುವುದಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಅಡುಗೆಗಾಗಿ ಇನ್ನೂ ಕೂಡ ಕಟ್ಟಿಗೆಯನ್ನು ಬಳಸುತ್ತಿರುವಂತಹ ಕುಟುಂಬಗಳ ಸಮೀಕ್ಷೆಯನ್ನು ಇಲಾಖೆಯೇ ಕೈಗೊಂಡು, ಅಂತಹ ಫಲಾನುಭವಿಗಳನ್ನು ಗುರುತಿಸಿ, ಅವರಿಗೆ ಉಜ್ವಲ ಯೋಜನೆಯಡಿ ಅಡುಗೆ ಅನಿಲ ಸಿಲಿಂಡರ್ ವಿತರಿಸುವ ಕಾರ್ಯ ಆಗಬೇಕು ಎಂದು ಸಚಿವರು ಸೂಚನೆ ನೀಡಿದರು.
ಬೆಳೆ ಹಾನಿ ಸಮೀಕ್ಷೆ ಸಮರ್ಪಕವಾಗಿಸಿ : ಹೆಚ್ಚಿನ ಮಳೆಯಿಂದಾಗಿ ಈ ವರ್ಷ 487 ರೈತರ 345 ತೋಟಗಾರಿಕೆ ಬೆಳೆ ಹಾನಿಗೊಳಗಾಗಿದೆ, ಎನ್‍ಡಿಆರ್‍ಎಫ್ ಮಾರ್ಗಸೂಚಿಯಂತೆ 71.75 ಲಕ್ಷ ರೂ. ನಷ್ಟದ ಅಂದಾಜು ಮಾಡಲಾಗಿದ್ದು, ಜಂಟಿ ಸಮೀಕ್ಷೆ ಆಗಿದೆ, ಅಲ್ಲದೆ ಪರಿಹಾರ್ ತಂತ್ರಾಂಶದಡಿಯೂ ನಮೂದಿಸಲಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ ಒಂದು ವಾರದಿಂದ ಸತತವಾಗಿ ಮಳೆಯಾಗುತ್ತಿದ್ದು, ಇದೇ ರೀತಿ ಮಳೆ ಮುಂದುವರೆದರೆ, ಈರುಳ್ಳಿ, ಪಪ್ಪಾಯ ಹಾಗೂ ದಾಳಿಂಬೆ ಬೆಳೆಗಳಿಗೆ ರೋಗಬಾಧೆ ಕಾಡುವ ಸಾಧ್ಯತೆಗಳಿವೆ. ಜಿಲ್ಲೆಯಲ್ಲಿ ಸುಮಾರು 20000 ಹೆ. ನಲ್ಲಿ ಈರುಳ್ಳಿ, 6800 ಹೆ. ನಲ್ಲಿ ದಾಳಿಂಬೆ ಬೆಳೆಯಲಾಗುತ್ತಿದೆ. ಹೆಚ್ಚಿನ ಮಳೆಯಿಂದ ಈರುಳ್ಳಿ ಬೆಳೆಗಾರರಿಗೆ ನಷ್ಟ ಉಂಟಾಗುವ ಸಾಧ್ಯತೆಗಳಿವೆ. ಎನ್‍ಹೆಚ್‍ಎಂ ಯೋಜನೆಯಡಿ ಈರುಳ್ಳಿ ಸಂಗ್ರಹಣಾ ಘಟಕಕ್ಕೆ ಸಹಾಯಧನ ನೀಡಲಾಗುತ್ತಿದ್ದು, ಘಟಕಗಳಲ್ಲಿ ಸುಮಾರು 90 ದಿನ ಈರುಳ್ಳಿಯನ್ನು ಕೆಡದಂತೆ ಇಡಬಹುದು. ಪ್ರತಿ ವರ್ಷ ಈ ಯೋಜನೆಯಡಿ ಸಹಾಯಧನ ನೀಡಲಾಗುತ್ತಿದೆ ಎಂದು ತೋಟಗಾರಿಕೆ ಉಪನಿರ್ದೇಶಕಿ ಸವಿತಾ ಅವರು ಹೇಳಿದರು.
ಸಚಿವರು ಪ್ರತಿಕ್ರಿಯಿಸಿ, ಹೆಚ್ಚಿನ ಮಳೆಯಿಂದ ರೈತರಿಗೆ ಉಂಟಾಗುವ ನಷ್ಟವನ್ನು ತಪ್ಪಿಸಲು ಇಲಾಖೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು, ರೈತರಿಗೆ ಸಲಹೆಗಳನ್ನು ನೀಡಬೇಕು. ಅಲ್ಲದೆ ಬೆಳೆ ಹಾನಿ ಸಮೀಕ್ಷೆಯನ್ನು ಸಮರ್ಪಕವಾಗಿ ಕೈಗೊಳ್ಳಬೇಕು. ಇಲಾಖಾ ಯೋಜನೆಗಳ ಸೌಲಭ್ಯ ಹೆಚ್ಚಿನ ಸಂಖ್ಯೆಯಲ್ಲಿ ರೈತರನ್ನು ತಲುಪುವಂತೆ ಮಾಡಬೇಕು ಎಂದು ಸೂಚನೆ ನೀಡಿದರು.
ವಾಡಿಕೆಗಿಂತ ಹೆಚ್ಚು ಮಳೆ : ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಕಳೆದ ನಾಲ್ಕು ದಿನಗಳಲ್ಲಿ ಅತಿ ಹೆಚ್ಚು ಮಳೆಯಾಗಿದೆ. ವಾಡಿಕೆಗಿಂತ ಶೇ. 169 ರಷ್ಟು ಅಂದರೆ 371 ಮಿ.ಮೀ. ಮಳೆಯಾಗಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿ ಜಿಲ್ಲೆಯ ರೈತರಿಗೆ 349 ಕೋಟಿ ರೂ. ಸಹಾಯಧನ ಪಾವತಿಸಲಾಗಿದೆ. ಜಿಲ್ಲೆಯಲ್ಲಿ ರೈತರು ಗುಣಮಟ್ಟದ ಕೃಷಿ ಉತ್ಪನ್ನ ಮಾಡಿ, ತಮ್ಮದೇ ಬ್ರಾಂಡ್ ಮಾಡಿಕೊಳ್ಳುವ ರೀತಿಯಲ್ಲಿ ರೈತ ಉತ್ಪಾದಕ ಸಂಸ್ಥೆ (ಎಫ್‍ಪಿಒ) ಗಳ ಬಲಪಡಿಸಲು ಕೃಷಿ ಇಲಾಖೆ ಉದ್ದೇಶಿಸಿದೆ. ಆದರೆ ರಫ್ತು ಮಾಡುವ ಮಟ್ಟಕ್ಕೆ ಯಾವುದೇ ಎಫ್‍ಪಿಒ ಗಳು ಈ ವರೆಗೆ ಅಭಿವೃದ್ಧಿಪಡಿಸಿಕೊಂಡಿಲ್ಲ. ರಾಜ್ಯದಲ್ಲಿ 36 ಸಾವಿರ ಹೆ. ನಲ್ಲಿ ಸಿರಿಧಾನ್ಯ ಬೆಳೆಯಲಾಗುತ್ತಿದ್ದು, ಈ ಪೈಕಿ ಶೇ. 50 ರಷ್ಟು ಚಿತ್ರದುರ್ಗ ಜಿಲ್ಲೆಯಲ್ಲಿ, ಅದರಲ್ಲೂ ಹೊಸದುರ್ಗ ತಾಲ್ಲೂಕಿನಲ್ಲಿ ಅತಿ ಹೆಚ್ಚು ಸಿರಿಧಾನ್ಯ ಬೆಳೆಯಲಾಗುತ್ತಿದೆ. ಸರ್ಕಾರ ಸಿರಿಧಾನ್ಯಕ್ಕೆ ಪ್ರೋತ್ಸಾಹಿಸಲು ಸಿರಿಧಾನ್ಯ ಬೆಳೆಗಾರರಿಗೆ ರೈತ ಸಿರಿ ಯೋಜನೆಯಡಿ ವರ್ಷಕ್ಕೆ ಪ್ರತಿ ಹೆಕ್ಟೇರ್‍ಗೆ 10 ಸಾವಿರ ರೂ. ಪ್ರೋತ್ಸಾಹಧನ ನೀಡಲಾಗುತ್ತಿದೆ. ಕಳೆದ ವರ್ಷ 07 ಕೋಟಿ ರೂ. ಪ್ರೋತ್ಸಾಹಧನ ರೈತರಿಗೆ ನೀಡಲಾಗಿದೆ ಎಂದು ಜಂಟಿಕೃಷಿ ನಿರ್ದೇಶಕರು ತಿಳಿಸಿದರು. ಪ್ರತಿಕ್ರಿಯಿಸಿದ ಸಚಿವರು, ಸಿರಿಧಾನ್ಯ ಬೆಳೆಗೆ ಮಾರುಕಟ್ಟೆಯಲ್ಲಿ ವ್ಯಾಪಕ ಬೇಡಿಕೆ ಇದೆ. ಕೃಷಿ ಇಲಾಖೆಯಿಂದ ರೈತರಿಗೆ ಅಗತ್ಯ ಸಲಹೆ, ಸೌಲಭ್ಯ ಹಾಗೂ ಮಾಹಿತಿಯನ್ನು ಸಮರ್ಪಕವಾಗಿ ಒದಗಿಸಿದಲ್ಲಿ, ರೈತರ ಆರ್ಥಿಕ ಮಟ್ಟ ಸುಧಾರಣೆಯಾಗುತ್ತದೆ. ಈ ದಿಸೆಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಪ್ರಯತ್ನ ಮಾಡಬೇಕು ಎಂದರು.
ಅಧಿಕಾರಿಗಳ ಗೈರಿಗೆ ತೀವ್ರ ಅಸಮಾಧಾನ : ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮಾಹಿತಿ ನೀಡಲು ದಿಶಾ ಸಮಿತಿ ಸಭೆಗೆ ಆಗಮಿಸಬೇಕಿದ್ದ ಕೆಲ ಅಧಿಕಾರಿಗಳು ಗೈರು ಹಾಜರಾಗಿದ್ದಕ್ಕಾಗಿ ಸಚಿವ ಎ. ನಾರಾಯಣಸ್ವಾಮಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅಧಿಕಾರಿಗಳು ಈ ರೀತಿ ಪ್ರಮುಖ ಸಭೆಗಳಿಗೆ ಗೈರು ಹಾಜರಾಗುವುದು ಉದ್ಧಟತನದ ಪರಮಾವಧಿಯಾಗಿದ್ದು, ಇದು ಜಿಲ್ಲಾಡಳಿತಕ್ಕೆ ಗೌರವ ತರುವುದಿಲ್ಲ. ಗೈರು ಹಾಜರಿಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದ ವಿವರಣೆ ಪಡೆದು, ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ನಂದಿನಿದೇವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್, ಜಿ.ಪಂ. ಉಪಕಾರ್ಯದರ್ಶಿ ರಂಗಸ್ವಾಮಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಮಟ್ಟ ಹಾಗೂ ತಾಲ್ಲೂಕುಮಟ್ಟದ ಅಧಿಕಾರಿಗಳು ಇದ್ದರು. ವಿವಿಧ ಇಲಾಖೆಗಳಿಂದ ಅನುಷ್ಠಾನಗೊಳಿಸಲಾಗುವ ಕೇಂದ್ರ ಸರ್ಕಾರದ ಹಲವು ಯೋಜನೆಗಳ ಪ್ರಗತಿ ಪರಿಶೀಲನೆಯನ್ನು ಇದೇ ಸಂದರ್ಭದಲ್ಲಿ ಕೈಗೊಳ್ಳಲಾಯಿತು.