ಮಂಡ್ಯ: ಇತ್ತೀಚಿನ ದಿನಗಳಲ್ಲಿ ಕೆಲಸ ಸಮಸ್ಯೆ ಯುವಕರನ್ನು ಹೆಚ್ಚು ಕಾಡುತ್ತಿದೆ. ಎಷ್ಟೇ ಓದಿದರು ಕೆಲಸ ಸಿಗುವುದು ಬಹಳ ಕಷ್ಟ. ಎಷ್ಟೇ ಅಲೆದಾಡಿದರು ನಿರುದ್ಯೋಗಿಗಳಾಗಿಯೇ ಉಳಿದು ಬಿಡುತ್ತಾರೆ. ಸರಿಯಾದ ಕೆಲಸ ಸಿಗದ ಕಾರಣ ಓದಿದ್ದು ಏನೋ ಕೆಲಸ ಇನ್ಯಾವುದೋ ಎಂಬಂತ ಸ್ಥಿತಿ ತಲುಪಿದ್ದಾರೆ. ಇದೀಗ ಯುವಕರಿಗೆ ಕೇಂದ್ರ ಸಚಿವ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
ಇಂದು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಅರಳಕುಪ್ಪೆ ಗ್ರಾಮದ ಲಕ್ಷ್ಮಣ ಎಂಬುವವರ ಜಮೀನಿನಲ್ಲಿ ಭತ್ತವನ್ನು ನಾಟಿ ಮಾಡಿದರು. ಕುಮಾರಸ್ವಾಮಿ ಅವರನ್ನು ಮಣ್ಣಿನ ಮಗ ಅಂತಾನೇ ಕರೆಯುತ್ತಾರೆ. ರೈತರಿಗಾಗಿ ಮಿಡಿವ ಮನಸ್ಸು ಅಂತಾರೆ. ಅದೇ ಥರ ಕುಮಾರಸ್ವಾಮಿ ಅವರು ನಡೆದುಕೊಂಡಿದ್ದು, ಪ್ರತಿ ವರ್ಷದಂತೆ ಈ ವರ್ಷವೂ ರೈತರ ಜಮೀನಿಗೆ ಬಂದು ಭತ್ತ ನಾಟಿ ಮಾಡಿದ್ದಾರೆ.
ಈ ವೇಳೆ ಮಾತನಾಡಿದ ಕುಮಾರಸ್ವಾಮಿ ಅವರು, 2018ರಲ್ಲೂ ಕಾವೇರಿ ಮಾತೆಗೆ ಪೂಜೆ ಮಾಡಿ ಭತ್ತ ನಾಟಿ ಮಾಡಿದ್ದೆ. ಕೆಆರ್ಎಸ್ ಡ್ಯಾಂ ಭರ್ತಿಯಾಗಿದೆ. ಹೀಗಾಗಿ ಈ ವರ್ಷವೂ ಭತ್ತ ನಾಟಿ ಮಾಡಲು ಕರೆ ಬಂತು. ರೈತರ ಮನವಿ ಮೇರೆಗೆ ಭತ್ತ ನಾಟಿ ಮಾಡಲು ಬಂದಿದ್ದೇನೆ. ಜೊತೆಗೆ ಮೂರು ಬಾರಿ ತಾಯಿ ಚಾಮುಂಡೇಶ್ಚರಿ ನನಗೆ ಜನ್ಮ ನೀಡಿದ್ದಾಳೆ. ಈಗ ನನ್ನ ಆರೋಗ್ಯದ ಬಗ್ಗೆ ಚಿಂತೆಯಿಲ್ಲ. ನನ್ನ ನಾಡಿನ ರೈತರು ನೆಮ್ಮದಿಯಿಂದ ಬದುಕು ಕಟ್ಟಿಕೊಳ್ಳಲು ಹಾಗೂ ನಮ್ಮ ಯುವಕರಿಗೆ ಉದ್ಯೋಗ ಕೊಡಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ. ಇನ್ನು ಮಂಡ್ಯದ ಅನೇಕ ಯುವಕರು ಬಂದು ಮನವಿ ಮಾಡಿದ್ದಾರೆ. ನಿಮಗೆ ಒಂದು ಮಾತು ಕೊಡುತ್ತೇನೆ. ದೊಡ್ಡ ದೊಡ್ಡ ಕಂಪನಿಗಳಲ್ಲಿ ಮಾತುಕತೆ ನಡೆಸಿದ್ದೇನೆ. ಖಂಡಿತ ಆ ಕಂಪನಿಗಳಲ್ಲಿ ಕೆಲಸ ಕೊಡಿಸುತ್ತೇನೆ ಎಂದಿದ್ದಾರೆ.